ಚಿಕ್ಕಮಗಳೂರು: ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸುರೇಶನನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಣ್ಣೂರು ಅರಣ್ಯ ವ್ಯಾಪ್ತಿ ಬರುವ ನಕ್ಸಲ್ ಕ್ಯಾಂಪ್ ಮೇಲೆ ಕಾಡಾನೆಯೊಂದು ದಾಳಿ ಮಾಡಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ನಕ್ಸಲ್ ಸುರೇಶನನ್ನು ಕೇರಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುರೇಶ್ ಅಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ಪಡೆದ ಚಿಕ್ಕಮಗಳೂರು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಆತನಿಗೆ ಸದ್ಯ ಕಣ್ಣೂರು ಸರ್ಕಾರಿ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಆಸ್ಪತ್ರೆಯಲ್ಲಿ ರಾಜ್ಯ ಪೊಲೀಸರು ಬೀಡು ಬಿಟ್ಟಿದ್ದಾರೆ.
ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯ ವಿವಿಧೆಡೆ ಆತನ ವಿರುದ್ಧ 10ಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿವೆ. ಮೋಸ್ಟ್ ವಾಂಟೆಡ್ ನಕ್ಸಲ್ ಸುರೇಶನಿಗೆ ಈಗ ಸದ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ತಕ್ಷಣ ಆತನನ್ನು ರಾಜ್ಯಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್, ಕಳೆದ ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿ ಹಲವಾರು ಅಪರಾಧಗಳಲ್ಲಿ ಭಾಗಿಯಾಗಿದ್ದನು. ನಕ್ಸಲ್ ಸುರೇಶ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನವನ್ನು ಇತ್ತೀಚೆಗೆ ಪೊಲೀಸ್ ಇಲಾಖೆ ಘೋಷಣೆ ಮಾಡಿತ್ತು.
(ಪ್ರತ್ಯೇಕ ಪ್ರಕರಣ) ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ: ಪೊಲೀಸರಿಂದ ತನಿಖೆ
ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ನದಿಯಲ್ಲಿ ಮುಳುಗಿ ಸಾವಿಗೀಡಾಗಿರುವ ವ್ಯಕ್ತಿಯನ್ನು ಮೂಡಿಗೆರೆ ತಾಲೂಕು ಕಿತ್ತಲೆಗಂಡಿ ಗ್ರಾಮದ ಕೂಲಿ ಕಾರ್ಮಿಕ ಶಂಕರ್ (36 ವರ್ಷ) ಎಂದು ಗುರುತಿಸಲಾಗಿದೆ.
ಪತಿ ನಾಪತ್ತೆಯಾಗಿರುವ ಕುರಿತು ಆತನ ಪತ್ನಿ ಮೂಡಿಗೆರೆ ಠಾಣೆಗೆ ದೂರು ನೀಡಿದ್ದರು. ಆದರೆ ಇಂದು ಬೆಳಗ್ಗೆ ಕಿತ್ತಲೆಗಂಡಿ ಹೇಮಾವತಿ ಸೇತುವೆಯಿಂದ ಸ್ವಲ್ಪ ಮೇಲ್ಭಾಗದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಇದನ್ನು ಪೊಲೀಸರು ಪರಿಶೀಲಿಸಿದ್ದು, ಇದು ಶಂಕರ್ ಮೃತದೇಹ ಎಂದು ಪತ್ತೆ ಹಚ್ಚಿದ್ದಾರೆ. ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಮೃತ ಶಂಕರ್ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಈ ಸಾವು ಹೇಗೆ ಸಂಭವಿಸಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೂಡಿಗೆರೆ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇದನ್ನೂಓದಿ:ಹತ್ತು ಜನರಲ್ಲಿ ಕೆಎಫ್ಡಿ ಸೋಂಕು ಪತ್ತೆ: ಮಲೆನಾಡು ಭಾಗದಲ್ಲಿ ಆತಂಕ