ಚಿಕ್ಕೋಡಿ (ಬೆಳಗಾವಿ) : ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶದಲ್ಲಿ ನಲವತ್ತಕ್ಕೂ ಹೆಚ್ಚು ಕುಟುಂಬಗಳು ಕೃಷ್ಣಾ ನದಿ ನೀರಿನ ನಡುಗಡ್ಡೆಯಲ್ಲಿ ಸಿಲುಕಿ ಪ್ರಾಣಭಯದಲ್ಲೇ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ ಬ್ಯಾರಲ್ ಮೇಲೆ ಸಂಚಾರ ಬೆಳೆಸಿ ಜಾನುವಾರುಗಳಿಗೆ ಮೇವು ಹಾಗೂ ಗ್ರಾಮಕ್ಕೆ ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ.
ಹಲವು ವರ್ಷಗಳಿಂದ ನೆರೆ ಸಂತ್ರಸ್ತರಿಗೆ ಸರ್ಕಾರಗಳು ಪುನರ್ವಸತಿ ಕಲ್ಪಿಸುವಲ್ಲಿ ವಿಳಂಬ ಮಾಡುತ್ತಿರುವುದರಿಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ನಾವು ಹೊರಗೆ ಬರುವುದಿಲ್ಲ, ನೆರೆ ಬಂದಾಗ ಮಾತ್ರ ನೀವು ನಮ್ಮ ಮನೆಗೆ ಬರುತ್ತೀರಿ. ಯಾವುದೇ ಕಾರಣಕ್ಕೂ ನಾವು ಹೊರಗಡೆ ಬರುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನದಿ ತೀರದ ಹಲವು ಗ್ರಾಮಗಳಿಗೆ ಪುನರ್ವಸತಿ ಇಲ್ಲದೇ ಇರುವುದರಿಂದ ಪ್ರತಿಬಾರಿಯೂ ನೆರೆ ಬಂದಾಗ ಸಂತ್ರಸ್ತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂಜಾಗ್ರತಾ ಕ್ರಮವಾಗಿ ಅಥಣಿ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಹೊರ ತರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಥಣಿ ತಹಶೀಲ್ದಾರ್ ವಾಣಿ ಯು ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿ, ಹುಲಗಬಾಳ ಗ್ರಾಮ ಮಾಂಗ ವಸತಿ ನಡುಗಡ್ಡೆಯಾಗಿದೆ. ಇಲ್ಲಿ ಐವತ್ತಕ್ಕೂ ಹೆಚ್ಚು ಕುಟುಂಬಗಳು ಇರುವುದರಿಂದ ಅವರನ್ನು ನಾವು ಮನವೊಲಿಸಿ ಇವತ್ತು ಸಂಜೆ ಹೊರಗೆ ತರುತ್ತೇವೆ ಎಂದು ತಿಳಿಸಿದ್ದಾರೆ.
ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಯ ಮೇಲೆ ತೀವ್ರ ನಿಗಾ : ಬೆಳಗಾವಿ ಜಿಲ್ಲೆಯ ನದಿಗಳಿಂದ ಆಲಮಟ್ಟಿ ಜಲಾಶಯಕ್ಕೆ 1.80 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಆಲಮಟ್ಟಿಯಿಂದ ಇಂದಿನಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಗೊಳಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಬೆಳಗಾವಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಲ ಸಂಪನ್ಮೂಲ ಹಾಗೂ ಕಂದಾಯ ಇಬ್ಬರು ಅಧಿಕಾರಿಗಳು ಕೋಯ್ನಾ ಜಲಾಶಯದಲ್ಲಿ ಇರುತ್ತಾರೆ. ಜತ್ರಾಟ್ ಬ್ಯಾರೇಜ್ನಲ್ಲಿಯೂ ರಾಜ್ಯದ ಒಬ್ಬ ಅಧಿಕಾರಿ ಇರುತ್ತಾರೆ. ಕೊಲ್ಹಾಪುರದ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.
ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಯ ಮೇಲೆ ನಿಗಾ ವಹಿಸಲಾಗಿದೆ. ರಾಜಾಪುರದಿಂದ 1 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿಯಿಂದ 1.5 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಘಟಪ್ರಭಾ ಜಲಾಶಯದಲ್ಲಿ ಪ್ರತಿದಿನ ಮೂರು ಟಿಎಂಸಿ ನೀರು ಸಂಗ್ರಹ ಆಗುತ್ತಿದೆ. ಇಂದು ಸಂಜೆಯಿಂದ ಘಟಪ್ರಭಾ ನದಿಯಿಂದ ನೀರು ಬಿಡುಗಡೆ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಹೇಳಿದರು.
ಲೋಳಸೂರು ಬ್ರಿಡ್ಜ್ ಬಳಿ 35 ಸಾವಿರ ಕ್ಯೂಸೆಕ್ ನೀರು ಹರಿದು ಹೋಗಲಿದೆ. ಆಲಮಟ್ಟಿಯಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜೊತೆಗೆ ಇಂದು ಸಭೆ ಮಾಡಿದ್ದೇವೆ. ಕೃಷ್ಣ ನದಿ ವ್ಯಾಪ್ತಿಯಲ್ಲಿ ಯಾವುದೇ ತೊಂದರೆ ಇಲ್ಲ. ಒಂದೆರಡು ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ತಹಶಿಲ್ದಾರ್ಗಳಿಗೆ ಸ್ಥಳಕ್ಕೆ ಹೋಗಲು ಸೂಚನೆ ನೀಡಲಾಗಿದೆ.
ಕಾಗವಾಡ ತಾಲೂಕಿನ ಎರಡು ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ಘಟಪ್ರಭಾ ನದಿ ವ್ಯಾಪ್ತಿಯ ಹುಕ್ಕೇರಿ, ಗೋಕಾಕ್, ಮೂಡಲಗಿ ತಾಲೂಕು ಬರುತ್ತದೆ. ಸಂಕೇಶ್ವರದಲ್ಲಿ ಸಹ ನೀರು ಬರುವ ಬಗ್ಗೆ ಎಚ್ಚರ ವಹಿಸಲಾಗಿದೆ. ಬಳ್ಳಾರಿ ನಾಲಾದಿಂದ ಕುಂದರಗಿ, ಪಾಶ್ಚಾಪುರ ಗ್ರಾಮದ ತೋಟಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ರೈತರಿಗೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.
ಗೋಕಾಕ್ ನಗರದಲ್ಲಿ ಯಾವುದೇ ತೊಂದರೆ ಇಲ್ಲ. ಅಂಕಲಗಿ ಗ್ರಾಮದ ಜಮೀನಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಕುಂದರಗಿ ಅಡವಿ ಸಿದ್ದೇಶ್ವರ ಮಠದಲ್ಲಿ ಇರೋ ಎಲ್ಲರನ್ನೂ ಶಿಫ್ಟ್ ಮಾಡಲಾಗಿದೆ. ಅಂಕಲಗಿಯ ಮಠಕ್ಕೆ ಶಿಫ್ಟ್ ಮಾಡಲಾಗಿದೆ. ಮೂಡಲಗಿಯ ಹಲವು ಗ್ರಾಮಗಳಿಗೆ ಎಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಖಾನಾಪುರ ತಾಲೂಕಿನಲ್ಲಿ ಸತತವಾಗಿ ಮಳೆ ಆಗುತ್ತಿದೆ. ಮಾಚೋಳಿ, ಸಾಥೋಳಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಹಾಲಿನ ಪುಡಿ ಸೇರಿ ಸಾಮಗ್ರಿ ಒದಗಿಸಲಾಗಿದೆ. ಹಾಲಾತ್ರಿ ಹಳ್ಳ ಪ್ರವಾಹದಿಂದ ಮಂತುರ್ಗಾ ಸೇತುವೆ ಮುಳುಗಡೆಯಾಗಿದೆ. ಪರ್ಯಾಯ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಎಸ್ಡಿಆರ್ಎಫ್ ತಂಡ ಇಂದಿನಿಂದ ಖಾನಾಪುರದಲ್ಲಿ ಇರಲಿದೆ. ಹಾಗಾಗಿ, ಜಿಲ್ಲೆಯಲ್ಲಿ ಸದ್ಯಕ್ಕೆ ತೊಂದರೆ ಇಲ್ಲ. ಸಿಎಂ, ಸಚಿವರು, ಅಧಿಕಾರಿಗಳು ಸ್ವತಃ ಬೆಳಗಾವಿ ಜಿಲ್ಲೆಯ ಮಾಹಿತಿಯನ್ನು ಕೇಳುತ್ತಿದ್ದಾರೆ.
ಖಾನಾಪುರ ತಾಲೂಕಿನ ಅಮಗಾಂವ್ನಲ್ಲಿ ಮಹಿಳೆಗೆ ತೀವ್ರ ಅನಾರೋಗ್ಯ ಹಿನ್ನೆಲೆ ಕಟ್ಟಿಗೆ ಸ್ಟ್ರೇಚರ್ ಮೇಲೆ ಹೊತ್ತೊಯ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಅರಣ್ಯ ಪ್ರದೇಶದಲ್ಲಿನ ಜನರಿಗೆ ಔಷಧ ನೀಡಲು ಸೂಚನೆ ನೀಡಲಾಗಿದೆ. ಮಳೆ ಕಡಿಮೆಯಾದ ಮೇಲೆ ಕಾಡಂಚಿನ ಜನರಿಗೆ ಪುನರ್ವಸತಿ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹದ ಹಿನ್ನೆಲೆ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಗುರುತಿಸಲಾಗಿರುವ 427 ಕಾಳಜಿ ಕೇಂದ್ರಗಳಿಗೆ ಎಲ್ಲಾ ತಹಶೀಲ್ದಾರರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಬೇಕು. ತುರ್ತು ಸಂದರ್ಭದಲ್ಲಿ ಗ್ರಾಮಸ್ಥರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಈ ವೇಳೆ ಜಿಪಂ ಸಿಇಓ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ದಿನೇಶ್ ಕುಮಾರ್ ಮೀನಾ ಇದ್ದರು.
ಇದನ್ನೂ ಓದಿ : ಚಿಕ್ಕೋಡಿ ಭಾಗದ ನದಿಗಳಲ್ಲಿ ಪ್ರವಾಹದ ಭೀತಿ; ನೆರೆಯ ನಡುವೆ ಮೊಸಳೆ ಪ್ರತ್ಯಕ್ಷ - Fear of floods in Chikkodi