ಬೆಳಗಾವಿ: ಹಲವು ವಿವಾದಗಳಿಂದ ಆಗಾಗ ಸುದ್ದಿಯಲ್ಲಿರುವ ಬೆಳಗಾವಿ ಕೇಂದ್ರ ಕಾರಾಗೃಹದ ಮೇಲೆ ಬೆಳ್ಳಂಬೆಳಗ್ಗೆ ಮಹಾನಗರ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಸೇರಿ 260ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ದಾಳಿಯಲ್ಲಿ ಭಾಗಿಯಾಗಿದ್ದರು.
ತಂಬಾಕು ಪಾಕೇಟ್, ಸಿಗರೇಟ್, ಮೂರು ಚಾಕುಗಳು, ಸ್ಮಾಲ್ ಹಿಟರ್ ವೈಯರ್ ಬಂಡಲ್, ಎಲೆಕ್ಟ್ರಿಕಲ್ ಒಲೆ ಸೇರಿ ಮತ್ತಿತರ ವಸ್ತುಗಳನ್ನು ದಾಳಿ ವೇಳೆ ಪೊಲೀಸರು ಜಪ್ತಿ ಮಾಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ನಮಗೆ ಮಾಹಿತಿ ಬಂದ ಹಿನ್ನೆಲೆ ಇಂದು ಏಕಾಏಕಿ ಜೈಲಿನ ಮೇಲೆ ದಾಳಿ ಮಾಡಿದ್ದೇವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಸಿಗರೇಟ್, ತಂಬಾಕು ಪಾಕೇಟ್ ಇನ್ನಿತರ ವಸ್ತುಗಳು ಜೈಲಿನೊಳಗೆ ಹೇಗೆ ಬಂದವು ಮತ್ತು ಯಾರು ತೆಗೆದುಕೊಂಡು ಬಂದರು ಎಂಬ ವಿಚಾರಗಳ ಬಗ್ಗೆ ತನಿಖೆ ನಡೆಸುತ್ತೇವೆ. ತನಿಖೆ ಬಳಿಕ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಓದಿ: ಕೆಐಡಿಬಿಯಲ್ಲಿ ಬಹುಕೋಟಿ ವಂಚನೆ ಪ್ರಕರಣ: ಇಂದು ಮುಂದುವರಿದ ತನಿಖೆ, ಓರ್ವ ವಶ - ED Raids Continue