ವಿಜಯಪುರ: ಹತ್ತಿ ಮಾರಾಟ ಮಾಡಿ ವಾಪಸ್ ಆಗುತ್ತಿದ್ದ ಕ್ಯಾಂಟರ್ ಅನ್ನು ಅಡ್ಡಗಟ್ಟಿ ಅದರಲ್ಲಿದ್ದ 32 ಲಕ್ಷ ನಗದು ದೋಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರ ಭಾಗದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಕಲಬುರಗಿ ಜಿಲ್ಲೆಯ ಹತ್ತಿ ವ್ಯಾಪಾರಿ ಚಂದ್ರಕಾಂತ ಕುಂಬಾರ ಎಂಬುವರಿಗೆ ಸೇರಿದ ಹತ್ತಿಯನ್ನು ಕ್ಯಾಂಟರ್ ಮೂಲಕ ಚಾಲಕ ಮಹಾಂತೇಶ ಕುಂಬಾರ ಹಾಗೂ ಸಹಾಯಕ ಮಲ್ಲು ಕೊಡಚಿ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿರೋ ಕಾರ್ಖಾನೆಗೆ ತಂದು ಮಾರಾಟ ಮಾಡಿದ್ದರು. ಇದರಿಂದ ಬಂದ 32 ಲಕ್ಷ ರೂ. ಹಣದೊಂದಿಗೆ ಜೇವರ್ಗಿಗೆ ಹಿಂತಿರುಗಿದ್ದರು. ಈ ವೇಳೆ ವಾಹನ ಕೊಲ್ಹಾರ ಪಟ್ಟಣದ ಹೊರ ಭಾಗದಲ್ಲಿ ಬರುತ್ತಿದ್ದಂತೆ ಬುಲೆರೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಕ್ಯಾಂಟರ್ ಮೇಲೆ ಮೇಲೆ ಕಲ್ಲು ಮತ್ತು ರಾಡ್ ನಿಂದ ದಾಳಿ ನಡೆಸಿ ಅಡ್ಡಗಟ್ಟಿದ್ದಾರೆ.
ಬಳಿಕ ಕ್ಯಾಂಟರ್ ಚಾಲಕ ಮಹಾಂತೇಶ್ ಮತ್ತು ಸಹಾಯಕ ಮಲ್ಲು ಕೊಡಚಿ ಮೇಲೂ ಹಲ್ಲೆ ನಡೆಸಿ ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿ ಪರಾರಿಯಾಗಿದ್ದಾರೆ. ದರೋಡೆಕೋರರಿಂದ ಹಲ್ಲೆಗೀಡಾದ ಮಹಾಂತೇಶ ಹಾಗೂ ಮಲ್ಲು ಕೊಡಚಿಗೆ ಕೊಲ್ಹಾರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ವಿಷಯ ತಿಳಿದುವ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; ಮನೆ ಕೆಲಸದಾಕೆ ಬಂಧನ - Theft Case