ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರ ವಿಚಾರಣೆಯಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ರೇಣುಕಾಸ್ವಾಮಿ ಹತ್ಯೆಗೈದ ಬಳಿಕ ನಾಲ್ವರು ಬಂಧಿತ ಆರೋಪಿಗಳಿಗೆ ತಲಾ ಐದು ಲಕ್ಷ ಹಣ ನೀಡಿ ಪೊಲೀಸರ ಮುಂದೆ ತಪ್ಪೊಪ್ಪಿಕೊಳ್ಳಲು ಆರೋಪಿ ದರ್ಶನ್ ಸಹಚರ ದೀಪಕ್ ಹೇಳಿರುವುದಾಗಿ ತನಿಖೆಯಿಂದ ಗೊತ್ತಾಗಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.
ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್ ಅಪ್ಲಿಕೇಶನ್ನಲ್ಲಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಬರಕೂಡದು. ಬಂಧನವಾದ ಬಳಿಕ ವಕೀಲರ ಫೀಸ್ ಸೇರಿದಂತೆ ಮನೆಯವರಿಗೆ ಹಣ ನೀಡುವುದಾಗಿ ದರ್ಶನ್ ಸಹಚರ ಹಾಗೂ ಪ್ರಕರಣದಲ್ಲಿ ಬಂಧಿತನಾಗಿರುವ ದೀಪಕ್, ಶರಣಾಗತಿಯಾಗಿದ್ದ ಕಾರ್ತಿಕ್, ರಾಘವೇಂದ್ರ, ಕೇಶವಮೂರ್ತಿ ಹಾಗೂ ನಿಖಿಲ್ ನಾಯಕ್ಗೆ ಭರವಸೆ ನೀಡಿದ್ದ. ಅದರಂತೆ ನಿಖಿಲ್ ಹಾಗೂ ಕೇಶವಮೂರ್ತಿಗೆ ತಲಾ ಐದು ಲಕ್ಷ ಹಣ ನೀಡಿದ್ದ. ಬಂಧನವಾದ ಬಳಿಕ ಮನೆಯವರಿಗೆ ಹಣ ನೀಡುವುದಾಗಿ ಕಾರ್ತಿಕ್ ಮತ್ತು ರಾಘವೇಂದ್ರಗೆ ಹೇಳಿದ್ದ. ಇದರಂತೆ ಜೂ.10ರಂದು ರಾತ್ರಿ 7 ಗಂಟೆ ವೇಳೆಗೆ ನಾಲ್ವರು ಆರೋಪಿಗಳು ಪೊಲೀಸರ ಮುಂದೆ ಶರಣಾಗತಿ ಆಗಿರುವುದಾಗಿ ರಿಮಾಂಡ್ ಅರ್ಜಿಯಲ್ಲಿ ಪೊಲೀಸರು ನಮೂದಿಸಿದ್ದಾರೆ.
ಹತ್ಯೆ ಪ್ರಕರಣದಲ್ಲಿ ಒಟ್ಟು 17 ಮಂದಿ ಭಾಗಿಯಾಗಿರುವುದು ದೃಢಪಟ್ಟಿದೆ. 13 ಮಂದಿಯನ್ನು ಮಾತ್ರ ಪೊಲೀಸರು ಅರೆಸ್ಟ್ ಮಾಡಿದ್ದು, ಇನ್ನುಳಿದ ಐವರು ತಲೆಮರೆಸಿಕೊಂಡಿದ್ದಾರೆ. ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್ ಬರುತ್ತಿರುವ ಬಗ್ಗೆ ನಟಿ ಪವಿತ್ರಾ ಗೌಡ ಗಮನಕ್ಕೆ ತಂದ ಬಳಿಕ ಚಿತ್ರದುರ್ಗದ ರಾಘವೇಂದ್ರನಿಗೆ ಮಾಹಿತಿ ತಿಳಿಸಿ ರೇಣುಕಾಸ್ವಾಮಿಯನ್ನ ನಗರಕ್ಕೆ ಕರೆಸಿಕೊಳ್ಳಲಾಗಿತ್ತು.
ರಾಘವೇಂದ್ರ ಮುಖಾಂತರ ರೇಣುಕಾಸ್ವಾಮಿಯನ್ನ ಪಟ್ಟಣಗೆರೆಯಲ್ಲಿರುವ ಶೆಡ್ವೊಂದಕ್ಕೆ ಕರೆತಂದು ಹಗ್ಗ, ರಿಪೀಸ್ ಪಟ್ಟಿ, ಕೋಲಿನಿಂದ ಹೊಡೆದು ಹತ್ಯೆ ಮಾಡಿ ಬಳಿಕ ಸುಮ್ಮನಹಳ್ಳಿಯ ಬ್ರಿಡ್ಜ್ ಬಳಿಯ ಮೋರಿ ಬಳಿ ಶವ ಎಸೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳನ್ನು ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಪೊಲೀಸರು ಕೊಟ್ಟ ಕಾರಣಗಳೇನು?: ಪ್ರಕರಣದಲ್ಲಿ ಆರೋಪಿಗಳ ಮೊಬೈಲ್ಗಳನ್ನು ರಿಟ್ರೀವ್ ಮಾಡಿಸಿ ಮಾಹಿತಿ ಸಂಗ್ರಹಿಸಬೇಕಿದೆ. ಆರೋಪಿಗಳು ಕೊಲೆಯಾದ ಸ್ಥಳದ ಪಂಚನಾಮೆ ಮಾಡಿ ಹತ್ಯೆಗೆ ಬಳಸಿದ್ದ ಕೋಲು, ಹಗ್ಗ, ರಿಪೀಸ್ ಪಟ್ಟಿಯನ್ನ ವಶಕ್ಕೆ ಪಡೆಯಬೇಕಿದೆ. ಆರೋಪಿಗಳ ಆಧಾರ್ ಕಾರ್ಡ್ಗಳನ್ನು ವಶಕ್ಕೆ ಪಡೆಯಬೇಕಿದೆ. ಬಂಧಿತನಾಗಿರುವ ನಟ ಪ್ರಭಾವಿಯಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಬೇಕಿದೆ ಎಂದು ಪೊಲೀಸರು ಕಾರಣಗಳನ್ನು ನೀಡಿದ್ದರು.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಗೈದ ಸ್ಥಳಕ್ಕೆ ದರ್ಶನ್ ಕರೆದೊಯ್ದು ಮಹಜರು ನಡೆಸಿದ ಪೊಲೀಸರು - Renukaswamy Murder Case