ಹುಬ್ಬಳ್ಳಿ: "ಇವತ್ತು ಅಥವಾ ನಾಳೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬರಬಹುದು. ಸಿಇಸಿ ಮೀಟಿಂಗ್ ಆಗಬೇಕು, ಹಾಗಾಗಿ ಸ್ವಲ್ಪ ತಡವಾಗ್ತಿದೆ. ಬಹುಶಃ 18ಕ್ಕೆ ಎರಡನೇ ಪಟ್ಟಿ ಬಿಡುಗಡೆ ಆಗಬಹುದು" ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, 'ಚುನಾವಣೆ ದಿನಾಂಕ ಕೂಡ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ ಎನ್ನುವುದು ಪ್ರಶ್ನೆಯಾಗಿದೆ. ಚುನಾವಣಾ ಆಯೋಗದ ಅಧಿಕಾರಿ ರಾಜೀನಾಮೆ ನೀಡಿರೋದು ಇದಕ್ಕೆಲ್ಲ ಕಾರಣ" ಎಂದರು.
"ಮೋದಿ ಸರ್ಕಾರ ಬಂದ ಮೇಲೆ ನ್ಯಾಯಾಧೀಶರನ್ನು ಹೊರಹಾಕಿದ್ದಾರೆ. ಚುನಾವಣಾ ಆಯೋಗದಿಂದ ಹೊರಹಾಕಿದ್ದಾರೆ. ಹೀಗಾಗಿ ನಿಷ್ಪಕ್ಷಪಾತ ಆಗೋಕೆ ಎಲ್ಲಿ ಸಾಧ್ಯ? ಸ್ವಾಯತ್ತ ಸಂಸ್ಥೆಗಳು ಬಿಜೆಪಿ ಅನುಸಾರ ನಡೆಯಬೇಕು. ಇದು ದೇಶದಲ್ಲಿ ನಡೆಯುತ್ತಿದೆ. ಆಯೋಗ, ಸಂಸ್ಥೆ ಎಲ್ಲವೂ ಬಿಜೆಪಿ ಪರವಾಗಿದೆ. ಇದರಲ್ಲಿ ಚುನಾವಣಾ ಆಯೋಗವೂ ಒಂದು. ಚುನಾವಣಾ ಆಯೋಗ ಬಿಜೆಪಿ ಪರವಾಗಿದೆ ಎಂದು ಪರೋಕ್ಷವಾಗಿ ವಾಗ್ದಾಳಿ" ನಡೆಸಿದರು.
"ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗ್ತಿದೆ. 6 ಸಾವಿರ ಕೋಟಿಗೂ ಅಧಿಕ ಹಣ ಬಿಜೆಪಿಗೆ ದೇಣಿಗೆ ಹೋಗಿದೆ. ಬಿಜೆಪಿ ಪಕ್ಷಕ್ಕೆ ಅನೇಕ ದೊಡ್ಡ ದೊಡ್ಡ ಕಂಪನಿಗಳು ದೇಣಿಗೆ ಕೊಟ್ಟಿವೆ. ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತಿದೆ, ಇದು ಭ್ರಷ್ಟಾಚಾರದ ಪರಮಾವಾಧಿ. ಅತ್ಯಂತ ಭ್ರಷ್ಟ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ. ನಮ್ಮ ಮುಂದೆ ಯಾರೂ ನಿಲ್ಲಬಾರದು ಅನ್ನೋದು ಇವರ ಉದ್ದೇಶ. ಪಕ್ಷಾಂತರ ಮಾಡಲು ಇಡಿ, ಐಟಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಮಾತನಾಡೋಕೆ ನೈತಿಕತೆ ಇಲ್ಲ. ಎಲ್ಲ ಕಡೆ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ದಿನವೂ ಕಾಂಗ್ರೆಸ್ ನಾಯಕರ ಮನೆ ಮೇಲೆ ರೈಡ್ ಆಗುತ್ತಿದೆ. ಈ ತರಹದ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ. ಚುನಾವಣಾ ಬಾಂಡ್ನಿಂದ ಅನೇಕ ವಿಚಾರ ಹೊರ ಬರುತ್ತದೆ. ಅದನ್ನು ಮುಚ್ಚಿಹಾಕಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ" ಎಂದರು.
"ಯಡಿಯೂರಪ್ಪ ಪೋಕ್ಸೋ ಕೇಸ್ ವಿಚಾರದ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ, ಕಾನೂನು ತನಿಖೆ ಆಗಬೇಕು. ದೂರು ದಾಖಲಾದ ಕೂಡಲೇ ದೋಷಿ ನಿರ್ದೋಷಿ ಅಂತಾ ಹೇಳೋಕೆ ಅಗಲ್ಲ. ನಾವು ಯಾರನ್ನೂ ತೇಜೋವಧೆ ಮಾಡಬಾರದು. ಸರಿಯಾದ ತನಿಖೆಯಾಗಬೇಕು" ಎಂದು ತಿಳಿಸಿದರು.
"ರಾಜ್ಯದಲ್ಲಿ ಸುಮಾರು 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಎಎ ಜಾರಿಗೆ ತಂದರು. ಮೋದಿ ಬರುವವರೆಗೂ ದೇಶ ಅಭಿವೃದ್ಧಿ ಆಗಿರಲಿಲ್ಲವಾ? ಮೋದಿ ಬರೋವರೆಗೂ ದೇಶ ನರಕ ಆಗಿತ್ತು. ಇದೀಗ ಸ್ವರ್ಗ ಆಗಿದೆಯಾ? ಸಿದ್ದರಾಮಯ್ಯ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ. ಸಿಲಿಂಡರ್ ದರ 100 ರೂ. ಇಳಿಕೆ ಮಾಡಿದ್ದಾರೆ. ಮೋದಿಗೆ ನೈತಿಕತೆ ಇದ್ದರೆ 1000 ರೂ. ಇಳಿಸಬೇಕಿತ್ತು. ಚುನಾವಣೆ ಮುಂಚೆ 100 ರೂಪಾಯಿ ಇಳಿಕೆ ಮಾಡುವುದು ಜನರನ್ನು ಮರಳು ಮಾಡೋಕೆ" ಎಂದು ಹೇಳಿದರು.
ರಾಜ್ಯದಲ್ಲಿ ಕ್ಯಾಂಡಿ ನಿಷೇಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ನಾವು ಈಗಾಗಲೇ ಈ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಕಲರ್ ಬಳಸಬಾರದು ಅಂತ ಹೇಳಲಾಗಿದೆ. ಜನ ಕೂಡಾ ಜಾಗೃತಿಯಾಗಬೇಕು. ಅಕಸ್ಮಾತ್ ಕಬಾಬ್ನಲ್ಲೂ ಕಲರ್ ಬಳಸೋದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಗೋಬಿ ಮಂಚೂರಿಯಲ್ಲಿ ಕಲರ್ ಬಳಸದಂತೆ ಸೂಚನೆ ನೀಡಲಾಗಿದೆ. ಯಾರಾದರೂ ಆಕರ್ಷಕ ಕಲರ್ ಬಳಸಿದರೆ ಕ್ರಮ ಕೈಗೊಳ್ಳಲಾಗುವುದು" ಎಂದರು.
"ಮೈಸೂರಲ್ಲಿ ಎರಡು ಮೂರು ಹೆಸರುಗಳಿವೆ. ಇಷ್ಟರಲ್ಲಿ ಟಿಕೆಟ್ ಫೈನಲ್ ಆಗುತ್ತೆ. ಸಿದ್ದರಾಮಯ್ಯ ಕ್ಷೇತ್ರ ಅದು ಅಲ್ಲಿ ಕೆಲ ಹೆಸರಗಳು ರೇಸ್ನಲ್ಲಿವೆ. ಯತೀಂದ್ರ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಈಶ್ವರಪ್ಪನವರ ಮನವೊಲಿಸುತ್ತೇವೆ, ಬೆಳಗಾವಿಯಿಂದ ಶೆಟ್ಟರ್ ಸ್ಪರ್ಧೆ: ಯಡಿಯೂರಪ್ಪ