ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳವಾಗಿದ್ದ 49 ಲಕ್ಷ ರೂ. ಮೌಲ್ಯದ 315 ಫೋನ್ಗಳನ್ನು ಇಂದು ಪ್ರಾಪರ್ಟಿ ರಿಟರ್ನ್ ಪರೇಡ್ನಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆದ ಪ್ರಾಪರ್ಟಿ ರಿಟರ್ನ್ ಪರೇಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಪೊಲೀಸರು ಎಂದರೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ನಮ್ಮ ಇಲಾಖೆ ಮೇಲೆ ಭರವಸೆ ಇಡಬೇಕು. ಇಂದು ಪ್ರತಿಯೊಬ್ಬರಿಗೂ ಮೊಬೈಲ್ ಪ್ರಪಂಚವಾಗಿ ಮಾರ್ಪಟ್ಟಿದೆ. ಏಳುವಾಗಲೂ, ಮಲಗುವಾಗಲೂ ಮೊಬೈಲ್ ನೋಡುತ್ತೇವೆ. ಅದೊಂದು ಕಿರಿಯ ಜಗತ್ತಾಗಿ ಮಾರ್ಪಟ್ಟಿದೆ. ಇಂತಹ ಮೊಬೈಲ್ ಕಳೆದುಕೊಂಡಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇಂತಹ ವೇಳೆ ಎದೆಗುಂದದೆ ತಕ್ಷಣ ಐಎಂಇಐ ಸಂಖ್ಯೆಯ ಸಮೇತ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬೇಕು. ಬಳಿಕ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಸಾರ್ವಜನಿಕರು ಮೊಬೈಲ್ ಬಳಸುವಾಗ ಸೂಕ್ತ ಸುರಕ್ಷಾ ಕ್ರಮಗಳನ್ನು ಪಾಲಿಸುವುದು ಅತ್ಯವಶ್ಯಕ. ಮೊಬೈಲ್ ಮೂಲಕ ನಿತ್ಯವೂ ಸಾರ್ವಜನಿಕರು ಮೋಸ ಹೋಗುತ್ತಿರುವ ಕುರಿತು ದಿನವೂ ಸೈಬರ್ ಠಾಣೆಗೆ ಹತ್ತಾರು ದೂರುಗಳು ದಾಖಲಾಗುತ್ತಿವೆ. ಸೈಬರ್ ಕ್ರೈಂ ಕುರಿತು ಹತ್ತಾರು ಜಾಗೃತಿ ಕಾರ್ಯಕ್ರಮ ಕೈಗೊಂಡು ಜನರಿಗೆ ಅರಿವು ಮೂಡಿಸಿದರೂ ಸಹ ಮೋಸಕ್ಕೆ ಒಳಗಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯಾವುದೇ ಹಣಕಾಸಿನ ಮೋಸಕ್ಕೆ ಒಳಗಾದರೇ 1930 ಸಂಖ್ಯೆಗೆ ಹಾಗೂ ಸಾರ್ವಜನಿಕರು ಸಮಸ್ಯೆಗೆ ಒಳಗಾದರೇ 112ಗೆ ಕರೆ ಮಾಡಿ ದೂರು ಸಲ್ಲಿಸಿದರೆ, ಕೂಡಲೇ ಪೊಲೀಸರು ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. 2023-24ನೇ ಸಾಲಿನಲ್ಲಿ ಕಳ್ಳತನವಾಗಿದ್ದ 49 ಲಕ್ಷ ಮೌಲ್ಯದ 315 ಮೊಬೈಲ್ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ದಾಖಲಾಗಿದ್ದ ಪ್ರಕರಣದಲ್ಲಿ ಶೇ.30ರಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇನ್ನುಳಿದ ಮೊಬೈಲ್ಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಲಾಗುದು ಎಂದು ಭರವಸೆ ನೀಡಿದರು.
ಈ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕುಶಾಲ್ ಚೌಕ್ಸೆ, ಎಸಿಪಿ ಶಿವಪ್ರಕಾಶ್ ನಾಯ್ಕ್ ಡಿಸಿಪಿ ಯಲ್ಲಪ್ಪ ಕಾಶಪ್ಪನವರ, ಸಿಇಎನ್ ಎಸಿಪಿ ಶಿವರಾಜ್ ಕಟಕಭಾವಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಮೊಬೈಲ್ ವಾರಸುದಾರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಪ್ರಯಾಣಿಕನಿಗೆ ₹2.5 ಲಕ್ಷ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ KSRTC ಬಸ್ ಕಂಡಕ್ಟರ್, ಚಾಲಕ - Honest Bus Conductor