ಹಾವೇರಿ: ರಾಜ್ಯದಲ್ಲಿ ಸಿಎಂ, ಡಿಸಿಎಂ ಹುದ್ದೆ ಖಾಲಿ ಇಲ್ಲ. ಈ ಕುರಿತ ಚರ್ಚೆಗೆ ಏನು ಹೇಳುವುದಕ್ಕಾಗುವುದಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ಸ್ವಾಮೀಜಿಗಳ ಮೂಲಕ ಸಿಎಂ ಹುದ್ದೆಗೆ ಲಾಬಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳ ಅಭಿಪ್ರಾಯ ವೈಯಕ್ತಿಕ. ಸಿಎಂ, ಡಿಸಿಎಂ ಹುದ್ದೆ ಕುರಿತ ಮಠಾಧೀಶರ ಹೇಳಿಕೆಗೆ ವರಿಷ್ಠರು ಉತ್ತರ ನೀಡಿದ್ದಾರೆ ಎಂದರು.
ನಾವು ಅಧಿಕಾರದಲ್ಲಿದ್ದೇವೆ, ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕು. ಯಾವ್ಯಾವುದೋ ಹೇಳಿಕೆ ನೀಡಿ ಸರ್ಕಾರಕ್ಕೆ ಮುಜುಗರ ಮಾಡಬಾರದು. ಲೋಕಸಭೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಸರ್ಕಾರ ಪತನವಾಗುತ್ತೆ ಎನ್ನುತ್ತಿರುವ ಬಿಜೆಪಿಗರ ಹಗಲುಗನಸು. ಪ್ರಧಾನಿ ನರೇಂದ್ರ ಮೋದಿ ಈ ಬಾರಿ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದರು. ಆದರೆ ಬಿಜೆಪಿಯವರು 240 ಸ್ಥಾನಗಳ ಮೇಲೆ ಏರಲಿಲ್ಲ. ಮೊದಲು ಅವರು ಸರ್ಕಾರವನ್ನು ರಕ್ಷಣೆ ಮಾಡಿಕೊಳ್ಳಲಿ ಎಂದು ಹೇಳಿದರು.
ಒಂದು ಕಡೆ ನಿತೀಶ್ ಇದ್ದಾರೆ. ಇನ್ನೊಂದು ಕಡೆ ಚಂದ್ರಬಾಬು ನಾಯ್ಡು ಇದ್ದಾರೆ. ಅವರ ಶಕ್ತಿ ಮೇಲೆ ಕೇಂದ್ರದಲ್ಲಿ ಇವರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿಯವರು ನೋಡಿಕೊಳ್ಳಲಿ, ಅದನ್ನು ಬಿಟ್ಟು ಸುಭದ್ರವಾದ ರಾಜ್ಯ ಸರ್ಕಾರ ಪತನವಾಗುತ್ತೆ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ರಂಭಾಪುರಿಶ್ರೀಗಳು ಸರ್ಕಾರ ಪಂಚ ಗ್ಯಾರಂಟಿಗಳ ನಿಲ್ಲಿಸುವ ಬಗ್ಗೆ ಪರಿಶೀಲನೆ ನಡೆಸಲಿ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಪಂಚಗ್ಯಾರಂಟಿ ನಿಲ್ಲುವುದಿಲ್ಲ. ಪಂಚ ಗ್ಯಾರಂಟಿ ನಮ್ಮ ಸರ್ಕಾರದ ಬದ್ಧತೆ ಮತ್ತು ನಿಲುವಾಗಿದೆ. ಮಠಾಧೀಶರಿಗೆ ನಾವು ಗೌರವ ನೀಡುತ್ತೇವೆ, ನಮಸ್ಕಾರ ಮಾಡುತ್ತೇವೆ. ಅವರ ಹೇಳಿಕೆಗಳು ವೈಯಕ್ತಿಕ ಎಂದು ಅವರೇ ಹೇಳಿದ್ದಾರೆ ಎಂದು ತಿಳಿಸಿದರು.