ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ನೀಡಿರುವುದನ್ನು ಖಂಡಿಸಿರುವ ಸಾಹಿತಿಗಳ ನಡೆ ಬಗ್ಗೆ ಟೀಕಿಸಿರುವ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಇವರೆಲ್ಲ ಸರ್ಕಾರಿ ಸಾಹಿತಿಗಳು ಎಂದು ಲೇವಡಿ ಮಾಡಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ತಪ್ಪು ನಡೆ ಬಗ್ಗೆ ನಾಡಿಗೆ ತಿಳಿಸಬೇಕಿದೆ. ತಪ್ಪನ್ನು ತಪ್ಪು ಎಂದು ಹೇಳಬೇಕು. ಆದರೆ, ಇವರೆಲ್ಲ ಸರ್ಕಾರದ ಮರ್ಜಿಯಲ್ಲಿ ಇರುವವರು. ಚಿಂತಕರುಗಳು ಈಗ ಎಲ್ಲಿದ್ದಾರೆ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
3667 ಎಕರೆ ಗಣಿ ಭೂಮಿಯನ್ನು ಎಕರೆಗೆ 1 ಲಕ್ಷದ 15 ಸಾವಿರ ರೂ.ಗಳಿಗೆ ರಾಜ್ಯ ಸರ್ಕಾರ ಜಿಂದಾಲ್ಗೆ ಮಾರಾಟ ಮಾಡಿದೆ. ಆ ಭೂಮಿಯಲ್ಲಿ ಬೆಲೆ ಬಾಳುವ ಐರನ್, ಮಿನರಲ್ಸ್ ಕಂಟೆಂಟ್ ಇದೆ. ಬೆಸ್ಟ್ ಓರಲ್ಸ್ ಸಿಗುವ 62% ಈಲ್ಡ್ ಬರುವ ಭೂಮಿಯನ್ನು ಜಿಂದಾಲ್ಗೆ ಏಕಪಕ್ಷೀಯವಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಭೂಮಿಗೆ ಯಾವುದೇ ರೀತಿಯ ಮೌಲ್ಯ ಕಟ್ಟಲು ಆಗುವುದಿಲ್ಲ. 2017ರಲ್ಲಿ ಕಾನೂನು ಇಲಾಖೆಯು ಭೂಮಿಯ ಮೌಲ್ಯ, ಒಳಗಿರುವ ಅದಿರು ಪ್ರಮಾಣ ನೋಡಿ ಮಾರಾಟ ಮಾಡಬೇಕು ಎಂದು ವರದಿ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಇಂದು ಅನುಕೂಲಕ್ಕೆ ತಕ್ಕಂತೆ ಸರ್ಕಾರದ ಭೂಮಿಯನ್ನು ಪರಭಾರೆ ಮಾಡಿದೆ ಎಂದು ಆರೋಪಿಸಿದ ಅವರು, ಇದು ಜನವಿರೋಧಿ ನೀತಿ, ಈ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಈ ನಿರ್ಧಾರ ಹಲವಾರು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಈ ವಿಚಾರದಲ್ಲಿ ತರಾತುರಿ ಬೇಡ. ಭೂಮಿ ಸರ್ಕಾರದ, ಜನರ ಆಸ್ತಿ. ಇದನ್ನು ಜಾಯಿಂಟ್ ಸೆಲೆಕ್ಟ್ ಕಮಿಟಿ ಮುಂದಿಟ್ಟು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದ ನಿರ್ಧಾರದಿಂದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಆಗುತ್ತದೆ. ಒಟ್ಟಾರೆ ಭೂಮಿಯ ಬೆಲೆ 52 ಕೋಟಿಗಳಿಗೆ ಮಾರಾಟ ಮಾಡಿದ್ದಾರೆ. ಆದರೆ, ಇವರು ತಮ್ಮ 14 ಸೈಟ್ಗೆ 62 ಕೋಟಿ ಕೇಳುತ್ತಾರೆ. ಈ ಭೂಮಿಯನ್ನು ಒಟ್ಟಾರೆ 52 ಕೋಟಿಗೆ ಮಾರಾಟ ಮಾಡಿದ್ದಾರೆ. ಇದ್ಯಾವ ನ್ಯಾಯ? ಎಂದು ಕುಟುಕಿದರು.
ಮುಡಾ ಹಗರಣಕ್ಕಾಗಿ ಒನ್ ಮ್ಯಾನ್ ಕಮಿಷನ್ ಮಾಡಿದ್ದೀರಿ ಸಿದ್ದರಾಮಯ್ಯ ಅವರೇ, ಒನ್ ಮ್ಯಾನ್ ಕಮಿಷನ್ ಕುಮಾರಕೃಪದಿಂದ ಆಪರೇಟ್ ಆಗ್ತಾ ಇದೆ. ಒನ್ ಮ್ಯಾನ್ ಕಮಿಷನ್ಗಾಗಿಯೇ ಮೇಜು ಖುರ್ಚಿ ಅಂತಾ 1.5 ಕೋಟಿ ರೂಪಾಯಿ ಖರ್ಚು ಆಗಿದೆ ಎಂದು ವಿಶ್ವನಾಥ್ ಆರೋಪ ಮಾಡಿದರು.
ವರದಿ ಬಿಡುಗಡೆ ಮಾಡಿ : ರೀ ಡೂ ವಿಚಾರದಲ್ಲಿ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿ. ಕೆಂಪಣ್ಣ ವರದಿ ಬಿಡುಗಡೆಯಾದರೆ ಸಿದ್ದರಾಮಯ್ಯ ಪಂಚೆ ಶರ್ಟು ಎಲ್ಲ ಮಸಿ ಆಗೋದು ಗ್ಯಾರಂಟಿ ಎಂದು ಸೂಚ್ಯವಾಗಿ ತಿಳಿಸಿದರು.
ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ಪ್ರಸಿಕ್ಯೂಷನ್ ಕೋರಿದ್ದ ಅರ್ಜಿ ವಿಚಾರಣೆ ಸೆ.9ಕ್ಕೆ ಮುಂದೂಡಿಕೆ - Muda Scam