ಮಂಗಳೂರು: ಮುಡಾ ಹಗರಣದ ಬಗ್ಗೆ ಮಾತನಾಡುತ್ತಿರುವ ಬಿಜೆಪಿ, ಜೆಡಿಎಸ್‌ನವರಿಗೆ ಈ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಹಗರಣದ ಬಗ್ಗೆ ಮುಖ್ಯಮಂತ್ರಿಗಳು ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆಗೆ ಆದೇಶಿಸಿದ್ದಾರೆ. ವಿಚಾರಣೆ ಬಳಿಕ ಹಾಲು ಯಾವುದು, ನೀರು ಯಾವುದೆಂದು ಗೊತ್ತಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಗರಣ ಆಗಿದೆಯೋ, ಇಲ್ಲವೊ ಗೊತ್ತಿಲ್ಲ. ಆದರೆ ಆಪಾದನೆ ಮಾಡಿದ್ದಾರೆ. ಸಿಬಿಐ, ಇಡಿ ಎಲ್ಲವೂ ವಿಚಾರಣೆಗೆ ಮುಂದೆ ಬಂದಿವೆ. ಅಂತಿಮ ನಿರ್ಣಯ ಬಂದ ಬಳಿಕ ಯಾರು ಎಲ್ಲಿದ್ದಾರೆಂದು ಗೊತ್ತಾಗುತ್ತದೆ. ರಾಜ್ಯ ಸರ್ಕಾರಕ್ಕೆ ಮಸಿ ಬಳಿಯಬೇಕೆಂದು ನಿರಂತರ ಪ್ರಯತ್ನವಾಗುತ್ತಿದೆ ಎಂದರು.
2ಜಿ, 3ಜಿ, 10ವರ್ಷವಾಯ್ತು. ಆ ಮಹಾನುಭಾವ ವಿಶ್ವಗುರು ಯಾರನ್ನಾದರೂ ಜೈಲಿಗೆ ಕಳಿಸಿದ್ರಾ?. ಈ ನಾಟಕಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ಸುಳ್ಳು ಬಹಳ ದಿನ ಇರುವುದಿಲ್ಲ. ಕರ್ನಾಟಕದಲ್ಲಿ ಆಗಿರುವ ಘಟನೆಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ಹೈಕಮಾಂಡ್ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರನ್ನು ಕರೆಯೋದು ಸಂಪ್ರದಾಯ. ಯಾವ ವಿಚಾರ ಮಾತನಾಡುತ್ತಾರೆಂದು ನೋಡಬೇಕಾಗಿದೆ ಎಂದು ಹೇಳಿದರು.
ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು ವಿಚಾರವಾಗಿ ಮಾತನಾಡಿದ ಅವರು, ನೀತಿ ಆಯೋಗ ಎಂಬುದು ಪ್ರಧಾನಮಂತ್ರಿಗಳಿಗೆ ತಾಳಮದ್ದಳೆ ಮಾಡೋದಕ್ಕೆ ಇರುವುದು. ನೀತಿ ಆಯೋಗ ಸರಿಯಿದ್ದರೆ ಬಜೆಟ್‌ನಲ್ಲಿ ಅತೀ ಹೆಚ್ಚು ತೆರಿಗೆ ನೀಡಿ ಖಜಾನೆ ತುಂಬಿಸುವ ರಾಜ್ಯಗಳಿಗೆ ಸಹಾಯ ಮಾಡಬೇಕಿತ್ತು. ರೋಗಗ್ರಸ್ತ ರಾಜ್ಯಗಳಿಗೆ ಹೆಚ್ಚಿನ ಹಣ ಕೊಟ್ಟಿದ್ದಾರೆ. ನಾವು ಬೇರೆಯವರಿಗೆ ಕೊಡಬೇಡಿ ಅನ್ನುವುದಿಲ್ಲ. ನಮ್ಮ ಶೇರ್ ನಮಗೆ ಕೊಡಿ ಎಂದು ಕೇಳಿದ್ರೆ ಕೊಟ್ಟಿಲ್ಲ. ಅದಕ್ಕೆ ನಾವು ನೀತಿ ಆಯೋಗವನ್ನು ಬಾಯ್ಕಾಟ್ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಮುಡಾ ಹಗರಣ ಮುಚ್ಚಿ ಹಾಕಲು ನ್ಯಾ.ದೇಸಾಯಿ ಆಯೋಗ ರಚನೆ: ಹೆಚ್.ಡಿ. ಕುಮಾರಸ್ವಾಮಿ - HDK outrage against Siddaramaiah