ಬೆಂಗಳೂರು: ''ಕೋವಿಡ್ ಸಂದರ್ಭದಲ್ಲಿ ವರ್ಕ್ ಫ್ರಂ ಹೋಂ ಜಾರಿಯಲ್ಲಿತ್ತು. ಈಗ ಸಚಿವರು ಸದನಕ್ಕೆ ಬಾರದಿದ್ದರೆ ವರ್ಕ್ ಫ್ರಂ ಅಸೆಂಬ್ಲಿ ಮಾಡಿಬಿಡಿ'' ಎಂದು ಬಿಜೆಪಿ ಹಿರಿಯ ಶಾಸಕ ಎಸ್.ಸುರೇಶ್ ಕುಮಾರ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.
ಇಂದು ಬೆಳಗ್ಗೆ ಸದನ ಆರಂಭಗೊಂಡಾಗ, ಸಚಿವರ ಗೈರು ಹಾಜರಿ ಎದ್ದುಕಾಣುವುದನ್ನು ಗಮನಿಸಿದ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಿ, ಮತ್ತೆ ಸದನಕ್ಕೆ ಆಗಮಿಸಿದಾಗಲೂ ಸಚಿವರ ಹಾಜರಾತಿ ಸುಧಾರಿಸಿರಲಿಲ್ಲ. ಇದನ್ನು ಗಮನಿಸಿದ ಸುರೇಶ್ ಕುಮಾರ್, ''ಒಂದು ಗಂಟೆ ಕಳೆದರೂ ಸಚಿವರು ಸದನಕ್ಕೆ ಬಂದಿಲ್ಲ. ಹೀಗಾಗಿ, ವರ್ಕ್ ಫ್ರಂ ಅಸೆಂಬ್ಲಿ ಮಾಡಿದರೆ ನಾವು ಅಲ್ಲಿಂದಲೇ ಕೇಳುತ್ತೇವೆ. ಅವರು ಉತ್ತರವನ್ನು ನೀಡಲಿ'' ಎಂದರು.
ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, ''ನೀವು ಸಚಿವರಿಗೆ ಗೈರುಹಾಜರಾಗಲು ಅನುಮತಿ ಕೊಟ್ಟಿದ್ದರೆ ಸದನವನ್ನು ಮುಂದೂಡಿ'' ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ''ನಾವು ಪ್ರಚಾರಕ್ಕೆ ಸಭಾತ್ಯಾಗ ಮಾಡಿಲ್ಲ. ನೀವು ವಿಪಕ್ಷದಲ್ಲಿದ್ದಾಗ ಮಾಡಿರಲಿಲ್ಲವೇ?'' ಎಂದು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
''ಮೊದಲ ಸಾಲಿನಲ್ಲಿ 10 ಸಚಿವರು ಇರಬೇಕು, ಮೂರನೇ ಒಂದು ಭಾಗ ಇಲ್ಲವೇ ನಾಲ್ಕು ಭಾಗ ಸಚಿವರಿರಬೇಕು. ಎರಡನೇ ಸಾಲಿನಲ್ಲಿ 15 ಸಚಿವರಲ್ಲಿ ಯಾರೂ ಇಲ್ಲ. ಈಗಷ್ಟೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಂದರು. ಮುಖ್ಯಮಂತ್ರಿ ಬಂದರೆ ಒಳ್ಳೆಯದು. 3 ಜನ ಸಚಿವರಿದ್ದರೂ ನಾವು ಚರ್ಚೆ ಪ್ರಾರಂಭಿಸುತ್ತೇವೆ'' ಎಂದು ಹೇಳಿದರು.
ನಂತರ ಸ್ಪೀಕರ್ ಮಧ್ಯಪ್ರವೇಶಿಸಿ ಈ ಚರ್ಚೆಗೆ ತೆರೆ ಎಳೆದು ಸದನವನ್ನು ಮುಂದುವರೆಸಿದರು.
ಇದನ್ನೂ ಓದಿ: ಸದನದಲ್ಲಿ ಸಚಿವರ ಗೈರು: ಸಭಾತ್ಯಾಗ ಮಾಡಿದ ಪ್ರತಿಪಕ್ಷಗಳ ಸದಸ್ಯರು - Opposition Members walkout