ಬೆಂಗಳೂರು : ಪಂಚೆ ಉಟ್ಟಿದ್ದಕ್ಕಾಗಿ ಮಾಲ್‌ಗೆ ಪ್ರವೇಶ ನಿರಾಕರಿಸಲ್ಪಟ್ಟಿದ್ದ ರೈತನಿಗೆ ಬೆಂಬಲವಾಗಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಇಂದು ವಿಧಾನಸೌಧಕ್ಕೆ ಪಂಚೆ ಧರಿಸಿ ಆಗಮಿಸಿದ ಘಟನೆ ನಡೆಯಿತು.
ಗುರುಮಿಠ್ಕಲ್ ಶಾಸಕ ಶರಣಗೌಡ ಕಂದಕೂರು ವಿಧಾನಸೌಧಕ್ಕೆ ಪಂಚೆ ಹಾಕಿಕೊಂಡು ಆಗಮಿಸಿದರು. ಇದೇ ವೇಳೆ ಮಾತನಾಡಿದ ಅವರು, ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಮೆಟ್ರೋ, ಮಾಲ್ನಲ್ಲಿ ಆಗಿರೋದು ಬಹಳ ನೋವಿನ ಸಂಗತಿ. ಫಕೀರಪ್ಪ ಅನ್ನೋರು ನಮ್ಮ ಉತ್ತರ ಭಾಗದವರು. ನಾವು ರೈತರ ಮಕ್ಕಳು ಎಂದರು.
ನಾವು ಸಿಎಂಗೆ ಮತ್ತು ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದೇವೆ. ಯಾರು ಅಪಮಾನ ಮಾಡಿದ್ದಾರೆ. ಅವರ ವಿರುದ್ಧ ಹಾಗೂ ಮಾಲ್ ವಿರುದ್ದ ಕ್ರಮ ಆಗಬೇಕು. ಸೆಕ್ಯೂರಿಟಿ ಏಜೆನ್ಸಿ ವಿರುದ್ದ ಕ್ರಮ ಆಗಬೇಕು. ಆ ಸೆಕ್ಯೂರಿಟಿ ಕೂಡ ರೈತನ ಮಗನೇ. ಆತನಿಗೆ ಮೇಲಿನ ಉಸ್ತುವಾರಿ ಆ ರೀತಿ ಹೇಳಿದ್ದಾರೆ. ಹೀಗಾಗಿ ಅವರ ವಿರುದ್ದ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ನಾನು ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಬೆಂಗಳೂರಿನಲ್ಲಿ ಈ ರೀತಿ ಆಗ್ತಾ ಇದೆ. ರೈತರು ಮಾಲ್ ನೋಡಬೇಕು ಅಂತಾ ಬರುತ್ತಾರೆ. ಈ ವಿಚಾರವಾಗಿ ಗಂಭೀರ ಕ್ರಮ ಆಗಬೇಕು ಎಂದು ಆಗ್ರಹಿಸಿದರು.