ದಾವಣಗೆರೆ: ಮೈಸೂರಿನ ಮುಡಾ ಹಗರಣ ಆರೋಪ ಪ್ರಕರಣ ರಾಜ್ಯ ರಾಜಕೀಯದಲ್ಲಿ ಕೆಲ ದಿನಗಳಿಂದ ಬಹು ಚರ್ಚಿತ ವಿಷವಾಗಿದೆ. ಈ ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿ ಮುಂದುವರಿದಿದೆ. ಈ ಮಧ್ಯೆ ಮುಖ್ಯಮಂತ್ರಿ ಸ್ಥಾನ ಖಾಲಿ ಆದ ಬಳಿಕ ಅವಕಾಶ ಸಿಕ್ಕರೆ ಲಿಂಗಾಯತ ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು. ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ, ಸಿಎಂ ಸಿದ್ದರಾಮಯ್ಯ ಅವರು ಒಳ್ಳೆ ಆಡಳಿತ ಕೊಡುತ್ತಿದ್ದಾರೆ. ಅವರ ಅವಧಿ ಮುಗಿದ ಮೇಲೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಶಾಸಕರು ಯಾರನ್ನು ಆರಿಸುತ್ತಾರೋ ಅವರನ್ನು ಹೈಕಮಾಂಡ್ ಸಿಎಂ ಮಾಡಲಿದೆ ಎಂದರು.
ಸಿಎಂ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ ಆಗಲಿದೆ: ಸಿಎಂ ಸ್ಥಾನದ ಬಗ್ಗೆ ಸಚಿವರು ಕೊಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ, ಸಚಿವರುಗಳಿಗೆ ಬೇಗ ಸಿಎಂ ಆಗೋಣ ಎಂಬ ಆಸೆ ಇದೆ. ಅದಕ್ಕೆ ಅವರು ಆ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಎಂ ಆಗುವ ಆಸೆ ಇದ್ದವರಿಗೆ ನಿರಾಸೆ ಆಗಲಿದೆ ಎಂದು ಹೇಳಿದರು.
ಎಲ್ಲರೂ ಸಿಎಂ ಸ್ಥಾನ ಕೇಳುತ್ತಾರೆ ಏನ್ ಮಾಡೋದು. ಇನ್ನು ಶಿವಾನಂದ ಪಾಟೀಲ್, ಎಂ. ಬಿ. ಪಾಟೀಲ್, ಡಿ. ಕೆ. ಶಿವಕುಮಾರ್, ಬಸವರಾಜ ರಾಯರೆಡ್ಡಿ, ಬಿ. ಆರ್. ಪಾಟೀಲ್ ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿದ್ದಾರೆ. ಸಿಎಂ ಕುರ್ಚಿ ಎಂದರೇ ಯಾರ್ ಬೇಡ ಎನ್ನುತ್ತಾರೆ ಅಂದರು.
ವೀರಶೈವ ಮಹಾಸಭಾದಲ್ಲಿ ತಮ್ಮ ಸ್ಥಾನ ಭದ್ರ: ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷನ ಕುರ್ಚಿ ಗಟ್ಟಿ ಇದೆ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತೊ ನೋಡೋಣ. ಸಿಎಂ ಸಿದ್ದರಾಮಯ್ಯ ಅವರು ಕೆಟ್ಟ ಆಡಳಿತ ನೀಡಿಲ್ಲ, ಒಳ್ಳೆ ಆಡಳಿತ ನೀಡ್ತಿದ್ದಾರೆ. ಮುಂದೆ ಅವಕಾಶ ಬಂತು ಎಂದರೆ ಸಿಎಂ ಸ್ಥಾನಕ್ಕೆ ಸೆಡ್ಡು ಹೊಡೆಯುತ್ತೇವೆ ಎಂದು ಹೇಳಿದರು.
ಮುಂದಿನ 5 ವರ್ಷ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ನಾನೇ: ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷಗಿರಿಗೆ ಅರ್ಜಿ ಹಾಕುವ ಸಮಯ ಇಂದಿಗೆ ಮುಗಿದಿದೆ. ಒಂದೇ ಅರ್ಜಿ ಅಲ್ಲಿ ಇರುವುದು, ಅದು ಶಾಮನೂರು ಶಿವಶಂಕರಪ್ಪ ಅವರ ಅರ್ಜಿ. ಬೇರೆಯವರು ಯಾರೂ ಅರ್ಜಿ ಹಾಕಿಲ್ಲ, ಒಂದೇ ಒಂದು ಅರ್ಜಿ ಇರುವ ಕಾರಣ ಮುಂದಿನ ಐದು ವರ್ಷಕ್ಕೆ ಅವಿರೋಧವಾಗಿ ನಾನೇ ಅಧ್ಯಕ್ಷ, ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿಎಂ ಯಾರಾಗಬೇಕೆಂಬ ವಿಚಾರ ಹಾದಿ-ಬೀದಿಲಿ ಚರ್ಚಿಸುವುದಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ - Lakshmi Hebbalkar