ಚಿಕ್ಕೋಡಿ(ಬೆಳಗಾವಿ): "ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್ ಹಿಂದೆ ಸಿಡಿ ಶಿವು ಇದ್ದಾನೆ" ಎಂದು ಶಾಸಕ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಅಥಣಿ ಪಟ್ಟಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಶಾಸಕ ಮುನಿರತ್ನ ದಲಿತರಿಗೆ ಮತ್ತು ಒಕ್ಕಲಿಗರಿಗೆ ನಿಂದಿಸಿರುವುದು ಇನ್ನೂ ಪ್ರೂವ್ ಆಗಿಲ್ಲ. ಇದನ್ನು ಸಿಡಿ ಶಿವು ಮಾಡಿದ್ದಾನೆ. ಅವನ ವಿರೋಧಿಗಳೆಲ್ಲರೂ ಜೈಲಿನಲ್ಲಿ ಕೂತಿದ್ದಾರೆ. ನಾನೊಬ್ಬ ಗಟ್ಟಿ ಇದ್ದೇನೆ ಹೀಗಾಗಿ ಹೊರಗಡೆ ಇದ್ದೇನೆ. ಡಿಕೆಶಿ ಮತ್ತು ಕಂಪನಿ ರಾಜ್ಯದಲ್ಲಿ ನನ್ನನ್ನು ಮೊದಲು ಬಲಿ ಪಡೆದರು. ನಂತರ ದೇವೇಗೌಡ ಕುಟುಂಬದ ಬಲಿ ಪಡೆದರು. ತದನಂತರ ಮುನಿರತ್ನ ಅವರನ್ನು ಬಲಿ ಪಡೆದುಕೊಂಡಿದ್ದಾರೆ" ಎಂದು ದೂರಿದರು.
ಮುಂದಿನ ಸಲ ಡಿಕೆಶಿ ಸೋಲುತ್ತಾನೆ: "ಡಿ.ಕೆ. ಶಿವಕುಮಾರ್ಗೆ ಈ ಕೆಲಸ ಬಿಟ್ಟರೆ ಬೇರೆ ಕೆಲಸವಿಲ್ಲ. ಅವನು ಯಾವುದೇ ಹೋರಾಟದಿಂದ ಬೆಳೆದಿಲ್ಲ. ಡಿಕೆಶಿ ಗ್ರಾಮ ಪಂಚಾಯಿತಿ ಸದಸ್ಯನಾಗಲೂ ಲಾಯಕ್ಕಿಲ್ಲ. ಅಡ್ಜಸ್ಟ್ಮೆಂಟ್ ರಾಜಕಾರಣಿ ಆಗಿದ್ದರಿಂದ ಏಳೆಂಟು ಸಲ ಎಂಎಲ್ಎ ಆಗಿದ್ದಾನೆ. ಮುಂದಿನ ಸಲ ಡಿಕೆಶಿ ಸೋಲುತ್ತಾನೆ" ಎಂದು ಭವಿಷ್ಯ ನುಡಿದರು.
"ಇದನ್ನೆಲ್ಲಾ ನೋಡಿದರೆ ಒಂದು ಫಿಲ್ಮ್ ನೋಡಿದ ರೀತಿ ಆಗುತ್ತದೆ. ಸಿಡಿ ಶಿವುನಿಂದ ಕಾಂಗ್ರೆಸ್ ನಾಯಕರು ಸಫರ್ ಆಗುತ್ತಾರೆ. ಇನ್ನೂ ಮುಂದೆ ಅನೇಕ ಸಿಡಿಗಳು ದೊಡ್ಡ ಪ್ರಮಾಣದಲ್ಲಿ ಬರುತ್ತವೆ. ಸಿಡಿ ಬಗ್ಗೆ ಸಿಬಿಐ ತನಿಖೆಗೆ ನೀಡಬೇಕಾಗಿದೆ. ದ್ವೇಷದ ರಾಜಕಾರಣದಿಂದ ಜಾತಿ ಜಾತಿ ನಡುವೆ ಬೆಂಕಿ ಹಚ್ಚುವ ಕಾರ್ಯ ನಡೆಯುತ್ತದೆ. ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಸಿಡಿ ತಡೆಗೆ ಪ್ರಧಾನಿ, ಸಿಬಿಐ ಕ್ರಮ ವಹಿಸಬೇಕೆಂದು" ಅವರು ಮನವಿ ಮಾಡಿದರು.
"ಮುನಿರತ್ನ ಬೈದಿರುವುದು ಇನ್ನೂ ಪ್ರೂವ್ ಆಗಿಲ್ಲ ಆವಾಗಲೇ ನಮ್ಮ ಬಿಜೆಪಿ ನಾಯಕರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಫ್ಎಸ್ಎಲ್ ವರದಿ ಬರುವರಿಗೆ ನಮ್ಮವರು ಏನು ಮಾತನಾಡಬಾರದು. ಈ ವಿಚಾರದಲ್ಲಿ ವಿಜಯಪುರ ಸಂಸದ ರಮೇಶ ಜಿಗಜಣಿಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಸಂಪೂರ್ಣವಾಗಿ ಎಫ್ಎಸ್ಎಲ್ ವರದಿ ಬಂದ ನಂತರ ಹಿರಿಯರು ಮಾತನಾಡಲಿ" ಎಂದರು.
"ಮುನಿರತ್ನ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರು ವರಿಷ್ಠರಿಗೆ ಒತ್ತಾಯ ಮಾಡಿದ್ದಾರೆ. ಆರ್. ಅಶೋಕ ಕೂಡ ಮುನಿರತ್ನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನಿರತ್ನ ಬೈದಿರುವುದು ದೃಢವಾಗಿಲ್ಲ. ಮುನಿರತ್ನ ಬೈದಿರುವ ಆಡಿಯೋ ಕಟ್ ಅಂಡ್ ಪೆಸ್ಟ್ ಇರಬಹುದು. ಮುನಿರತ್ನ ವಿಚಾರದಲ್ಲಿ ಬಿಜೆಪಿ ನಾಯಕರು ದುಡುಕಿ ನಿರ್ಧಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಬಿಜೆಪಿ ವರಿಷ್ಠರು ನೋಟಿಸ್ ಜಾರಿ ಮಾಡಬೇಕು" ಎಂದರು.