ಮಂಡ್ಯ : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸಹ ಹೆಚ್ ಡಿ ರೇವಣ್ಣನಂತೆ ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ. ಕುಮಾರಸ್ವಾಮಿ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ ಎಂದು ಮದ್ದೂರು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮದ್ದೂರಿನಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಮಾಡ್ತಿದೆ. ಯಾವ ಘನಕಾರ್ಯ ಮಾಡಿದ್ದಾರೆಂದು ಪ್ರೊಟೆಸ್ಟ್ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ. ಬಹಳಷ್ಟು ಜನ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ. ಸಂತ್ರಸ್ತೆಯರ ಪರ ಜೆಡಿಎಸ್ ನಾಯಕರು ಧ್ವನಿ ಎತ್ತಿದ್ದಾರಾ?. ಅವರಿಗೆ ಧೈರ್ಯ ಹೇಳಿದ್ದಾರಾ?. ಸಾಂತ್ವನ ಹೇಳುವ ಕೆಲಸ ಮಾಡಿದ್ದಾರಾ?. ಇವರ ಮನೆ ಹೆಣ್ಣುಮಕ್ಕಳು ಆಗಿದ್ದರೆ ಇವರು ಏನು ಮಾಡುತ್ತಿದ್ದರು?. ಯಾವ ನೈತಿಕತೆ ಇಟ್ಟುಕೊಂಡು ಜೆಡಿಎಸ್ ಪ್ರತಿಭಟನೆ ಮಾಡ್ತಿದೆ ಎಂಬುದರ ಬಗ್ಗೆ ಮೊದಲು ಸ್ಪಷ್ಟಪಡಿಸಬೇಕು ಎಂದರು.
ಕಾಂಗ್ರೆಸ್ ಸರ್ಕಾರ ನೀಚ ಸರ್ಕಾರ ಅಂತಾರೆ. ಬಡವರಿಗೆ ಯೋಜನೆ ಕೊಟ್ಟ ಸರ್ಕಾರ ನೀಚ ಸರ್ಕಾರವಾ?. ಗ್ರಾ. ಪಂ ನಿಂದ ವಿಧಾನಸಭೆವರೆಗೂ ದಬ್ಬಾಳಿಕೆ ಮಾಡಿಕೊಂಡೇ ಬಂದಿದ್ದಾರೆ. ಪ್ರಜ್ವಲ್ ವಿಡಿಯೋ ಸರ್ಕಾರ ಮಾಡಿಸಿದ್ದಾ? ಪ್ರಜ್ವಲ್ ರೇವಣ್ಣನೇ ವಿಡಿಯೋ ಮಾಡಿಕೊಂಡಿದ್ದರು. ಪ್ರಜ್ವಲ್ ರೇವಣ್ಣ ಜೆಡಿಎಸ್ ಸಂಸದ. ಜೆಡಿಎಸ್ ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷ. ಇದು ಒಂದು ಕುಟುಂಬಕ್ಕೆ ಸೇರಿದ ವಿಚಾರ. ಕುಮಾರಸ್ವಾಮಿ ಜನರ ಮುಂದೆ ಕ್ಷಮೆ ಕೇಳಬೇಕು. ಆದರೆ ಕಾರ್ಯಕರ್ತರನ್ನ ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಡಿಸಿಎಂ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ಕುಮಾರಸ್ವಾಮಿ ಏನ್ ಸಾಚಾನ? ಹಿಂದೆ ಸಿಎಂ ಆಗಿದ್ದವರು ಇಂತಹ ನೀಚ ಕೆಲಸ ಮಾಡುತ್ತಾರಾ? ಬೇರೆಯವರ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ. ಜೀವನದುದ್ದಕ್ಕೂ ಬ್ಲ್ಯಾಕ್ ಮೇಲ್, ಅಪಪ್ರಚಾರ ಮಾಡುತ್ತಾ ಬಂದಿದ್ದಾರೆ. ಇದೇ ಇವರ ಸಾಧನೆ ಎಂದು ಶಾಸಕ ಉದಯ್ ಕಿಡಿಕಾರಿದರು.
ಬೇರೆಯವರನ್ನ ಮುಳುಗಿಸಿದ್ದೇ ಕುಮಾರಸ್ವಾಮಿ ಸಾಧನೆ. ಇವರ ಮನೆ ಹೆಣ್ಣು ಮಕ್ಕಳು ಮರ್ಯಾದೆ ರೋಡ್‌ನಲ್ಲಿ ಹರಾಜಾಗಿದ್ದರೆ ಪ್ರತಿಭಟನೆ ಮಾಡ್ತಿದ್ರಾ? ಆದರೆ ಕುಮಾರಸ್ವಾಮಿ ಇವತ್ತು ಸ್ವಂತಕ್ಕೆ ಬೇಕಾಗಿರೋದನ್ನ ಮಾತ್ರ ಮಾಡ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಇನ್ನಾದರೂ ಎಚ್ಚೆತ್ತುಕೊಳ್ಳಿ. ಅಂದಾಭಿಮಾನದಲ್ಲಿ ಮುಳುಗಿದ್ರಿ ಇಷ್ಟು ದಿನ, ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಟನೆ ಅಂತೀರಲ್ಲ. ಯಾವ ನೈತಿಕತೆ ಇದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಹರಿಹಾಯ್ದರು.
ಹೆಚ್ಡಿಕೆಯಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರು ದೂರು ಕೊಡುವ ಕಾಲ ಬಹಳ ಹತ್ತಿರ ಆಗುತ್ತಿದೆ. ಕುಮಾರಸ್ವಾಮಿಯೂ ಕೂಡಾ ಪ್ರಜ್ವಲ್ ರೀತಿ ಪರಿಸ್ಥಿತಿ ಎದುರಿಸಲಿದ್ದಾರೆ. ಇಷ್ಟು ದಿನ ಯಾರು ಬಂದು ದೂರು ಕೊಡಲು ಧೈರ್ಯ ಮಾಡಿರಲಿಲ್ಲ ಎಂದು ಶಾಸಕ ಕದಲೂರು ಉದಯ್ ಸ್ಫೋಟಕ ಹೇಳಿಕೆ ನೀಡಿದರು.
ಇದನ್ನೂ ಓದಿ : ಪೆನ್ ಡ್ರೈವ್ ಪ್ರಕರಣ: ಶಿಕ್ಷೆ ಕೊಡಿಸುವ ಬದಲು ಪ್ರಚಾರ ಮಾಡಲಾಗುತ್ತಿದೆ; ಕುಮಾರಸ್ವಾಮಿ ಕಿಡಿ - H D Kumaraswamy