ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕಳೆದ ಐದು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೇವಣ್ಣ ಅವರಿಗೆ ಕೊನೆಗೂ ರಿಲೀಫ್ ಸಿಕ್ಕಂತಾಗಿದೆ. ಜಾಮೀನು ದೊರೆತರೂ ಇಂದೇ ಬಿಡುಗಡೆಯಾಗುವುದು ಅನುಮಾನವಾಗಿದ್ದು, ನಾಳೆ ಜೈಲಿನಿಂದ ರಿಲೀಸ್ ಆಗುವ ಸಾಧ್ಯತೆಯಿದೆ.
ರೇವಣ್ಣ ಅವರ ಜಾಮೀನು ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯವು, ಇಬ್ಬರ ಶ್ಯೂರಿಟಿ, ಐದು ಲಕ್ಷ ಬಾಂಡ್ ನೀಡಬೇಕು. ಸಾಕ್ಷ್ಯಾಧಾರ ನಾಶಪಡಿಸಬಾರದು ಹಾಗೂ ಎಸ್ಐಟಿ ತನಿಖೆಗೆ ಸಹಕರಿಸಬೇಕು. ಜೊತೆಗೆ, ಕೆ.ಆರ್. ನಗರಕ್ಕೆ ಹೋಗಬಾರದು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ರೇವಣ್ಣ ಪರ ವಕೀಲರಾದ ಶ್ರೀನಿವಾಸ್, ''ರೇವಣ್ಣ ಅವರಿಗೆ ಜಾಮೀನು ಮಂಜೂರಾಗಿದೆ. ಆದೇಶ ಪ್ರತಿ ದೊರೆತ ಬಳಿಕ ವಿಧಿಸಲಾಗಿರುವ ಷರತ್ತು ನೋಡಿಕೊಂಡು ಕಾನೂನು ಪ್ರಕ್ರಿಯೆ ನಡೆಸಲಾಗುವುದು. ಇಂದು ತಡವಾಗಿರುವುದರಿಂದ ಆದೇಶ ಪ್ರತಿಯನ್ನು ಜೈಲಾಧಿಕಾರಿಗಳಿಗೆ ತೋರಿಸಿ, ನಾಳೆ ರೇವಣ್ಣ ಅವರು ಕಾರಾಗೃಹದಿಂದ ಬಿಡುಗಡೆ ಆಗಲಿದ್ದಾರೆ'' ಎಂದು ಮಾಹಿತಿ ನೀಡಿದರು.
ಪ್ರಕರಣದ ಸಂಬಂಧ ಇಂದು ಮಧ್ಯಾಹ್ನ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ಎಸ್ಐಟಿ ಪರ ವಿಶೇಷ ಅಭಿಯೋಜಕರು ರೇವಣ್ಣ ಪರ ವಕೀಲರ ವಾದಕ್ಕೆ ಪ್ರತಿವಾದ ಮಂಡಿಸಿದ್ದರು. ಪ್ರತಿವಾದ ಮಂಡನೆ ಪೂರ್ಣಗೊಂಡ ಬಳಿಕ ಅಂತಿಮವಾಗಿ ಸಾಧ್ಯವಾದರೆ 5 ಗಂಟೆ ವೇಳೆಗೆ ಜಾಮೀನು ಅರ್ಜಿ ಬಗ್ಗೆ ಆದೇಶ ನೀಡುವುದಾಗಿ ನ್ಯಾಯಮೂರ್ತಿ ಸಂತೋಷ್ ಗಜಾನನ್ ಭಟ್ ತಿಳಿಸಿದ್ದರು. ಬಳಿಕ ನ್ಯಾಯಮೂರ್ತಿಯವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
ರೇವಣ್ಣ ಅವರಿಗೆ ವಿಧಿಸಿರುವ ಷರತ್ತುಗಳು:
- 5 ಲಕ್ಷ ರೂ. ಬಾಂಡ್.
- ಇಬ್ಬರು ವ್ಯಕ್ತಿಗಳ ಶ್ಯೂರಿಟಿ.
- ಪ್ರಕರಣ ಇತ್ಯರ್ಥವಾಗುವವರೆಗೆ ಕೆ.ಆರ್. ನಗರ ಪ್ರವೇಶಿಸುವಂತಿಲ್ಲ.
- ಕೋರ್ಟ್ಗೆ ಪಾಸ್ಪೋರ್ಟ್ ಸಲ್ಲಿಸಬೇಕು.
- ಸಾಕ್ಷಿ ನಾಶಪಡಿಸುವಂತಿಲ್ಲ.
- ವಿದೇಶಕ್ಕೆ ಹೋಗುವಂತಿಲ್ಲ.
- ಎಸ್ಐಟಿ ತನಿಖೆಗೆ ಸಹಕರಿಸಬೇಕು.
- ಪ್ರತಿ ತಿಂಗಳ ಎರಡನೇ ಭಾನುವಾರ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು.
- ಬೆಳಗ್ಗೆ 9ರಿಂದ 5 ಗಂಟೆಯ ಒಳಗೆ ಹಾಜರಾಗಬೇಕು.
- ಇಂಥದ್ದೇ ಅಪರಾಧ ಕೃತ್ಯದಲ್ಲಿ ಮತ್ತೆ ಭಾಗಿಯಾಗಬಾರದು.
ವಾದ - ಪ್ರತಿವಾದ ಹೀಗಿತ್ತು: ಇಂದು ವಾದ ಮುಂದುವರೆಸಿದ ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು, ''ಅಪಹರಣ ಹಾಗೂ ಒತ್ತೆ ಇಡುವುದು ಅಪರಾಧ. ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 364 ಎ ಅನ್ವಯಿಸಲು ಅಗತ್ಯ ಅಂಶಗಳಿಲ್ಲ. ಕಿಡ್ನಾಪ್ ಮಾಡಿದಾಗ ಡಿಮ್ಯಾಂಡ್ ಮಾಡಿರಬೇಕು. ಹೀಗಾಗಿ, ಮಾಡದಿದ್ದರೆ ಕೊಲ್ಲುವುದಾಗಿ ಬೆದರಿಸಬೇಕು. ಆದರೆ, ಈ ಅಪಹರಣ ಪ್ರಕರಣದಲ್ಲಿ ಅಂತಹ ಅಂಶಗಳಿಲ್ಲ. ಪೊಲೀಸರು ಈ ಪ್ರಕರಣ ದಾಖಲಿಸಿರುವುದೇ ಕಾನೂನುಬಾಹಿರ. 10 ವರ್ಷಗಳಿಂದ ಮಹಿಳೆ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದದು ನಿಜ. ಆದರೆ, ಅಪಹರಣ ಪ್ರಕರಣದಲ್ಲಿ ಕಕ್ಷಿದಾರರ ಸಂಬಂಧಿಯಲ್ಲ. ಮೊದಲು ದಾಖಲಿಸಿದ ಎಫ್ಐಆರ್ನ ಸಂತ್ರಸ್ತೆ ಮಾತ್ರ ಅವರ ಸಂಬಂಧಿ'' ಎಂದು ಸ್ಪಷ್ಟಪಡಿಸಿದ್ದರು.
''ಸೆಕ್ಷನ್ 27 ಎವಿಡೆನ್ಸ್ ಕಾಯ್ದೆಯಡಿ ಸಾಕ್ಷ್ಯಾಧಾರ ಸಂಗ್ರಹಿಸಬೇಕು. ಈ ಕೇಸ್ನಲ್ಲಿ ಅದ್ಯಾವುದನ್ನೂ ಮಾಡಿಲ್ಲ'' ಎಂದು ಸೆಕ್ಷನ್ 364 ಎ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳು ಜಾಮೀನು ನಿರಾಕರಣೆ ಮಾಡಿರುವ ತೀರ್ಪುಗಳ ಬಗ್ಗೆ ಸಿ.ವಿ. ನಾಗೇಶ್ ಅವರು ನ್ಯಾಯಾಲಯದ ಮುಂದಿಟ್ಟಿದ್ದರು.
''ತೀರ್ಪಿನ ಆದೇಶ ಪ್ರತಿ ನೀಡಿಲ್ಲ'' ಎಂಬ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜಯ್ನಾ ಕೊಠಾರಿ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ನಾಗೇಶ್ ಅವರು, ''ನನ್ನ ಬಳಿ ಇರುವುದು ಒಂದೇ ಪ್ರತಿ. ಓದಿದ ಬಳಿಕ ನೀಡುವೆ. ತಕರಾರು ತೆಗೆದರೆ ತೀರ್ಪಿನ ಪ್ರತಿ ಕೊಡುವುದಿಲ್ಲ. ನೀವೇ ಇದನ್ನೆಲ್ಲಾ ಓದಿಕೊಂಡು ಬರಬೇಕು'' ಎಂದು ಟಾಂಗ್ ನೀಡಿದ್ದರು.
''ಯಾವ ಆಯಾಮದಲ್ಲಿಯೂ ಆರೋಪ ಸಾಬೀತಾಗುವ ಅಂಶಗಳಿಲ್ಲ. ಈ ಪ್ರಕರಣದಲ್ಲಿ ರೇವಣ್ಣ ಮಾತ್ರ ಆರೋಪಿಯೇ ಹೊರತು ಪ್ರಜ್ವಲ್ ರೇವಣ್ಣ ಅಲ್ಲ. ಎರಡನ್ನೂ ಬೆಸೆಯಕೂಡದು. ಅಲ್ಲದೇ, ಕೆ.ಆರ್.ನಗರಕ್ಕೆ ರೇವಣ್ಣ ಪ್ರವೇಶ ಮಾಡಬಾರದು ಎಂಬುದು ಸೇರಿದಂತೆ ನ್ಯಾಯಾಲಯ ಷರತ್ತು ವಿಧಿಸಿದರೆ ಅದಕ್ಕೆ ಕಕ್ಷಿದಾರರು ಬದ್ಧರಾಗಿರುತ್ತಾರೆ. ಹೀಗಾಗಿ, ನನ್ನ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡಬೇಕು'' ಎಂದು ಮನವಿ ಮಾಡಿ ವಾದ ಅಂತ್ಯಗೊಳಿಸಿದ್ದರು.
ಎಸ್ಪಿಪಿ ಜಯ್ನಾ ಕೊಠಾರಿ ಪ್ರತಿವಾದ: ಬಳಿಕ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಪಿಪಿ) ಜಯ್ನಾ ಕೊಠಾರಿ ಅವರು, ಸಿ.ವಿ.ನಾಗೇಶ್ ಮಂಡಿಸಿದ ವಾದದಲ್ಲಿನ ಲೋಪಗಳ ಬಗ್ಗೆ ಪ್ರಸ್ತಾಪಿಸಿದರು. ''ಆರೋಪಿಯು ಸಂಬಂಧಿ ಎಂದು ಮೇ 5ರಂದು ಸಿಆರ್ಪಿಸಿ ಕಲಂ 161 ಹೇಳಿಕೆ ದಾಖಲಿಸಲಾಗಿದೆ'' ಎಂದರು. ಆಗ ಈ ಬಗ್ಗೆ ರಿಮ್ಯಾಂಡ್ ಅರ್ಜಿಯಲ್ಲಿ ಎಲ್ಲಿದೆ, ಓದಿ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಹಾಗೆಯೇ ಎರಡನೇ ರಿಮ್ಯಾಂಡ್ ಅರ್ಜಿಯಲ್ಲಿ ಯಾಕೆ ಹೇಳಿಲ್ಲ ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ಈ ವೇಳೆ ಎಸ್ಐಟಿ ತನಿಖಾಧಿಕಾರಿಯೊಂದಿಗೆ ಮಾತನಾಡಿದ ವಕೀಲರ ಮೇಲೆ ನ್ಯಾಯಾಧೀಶರು ಗರಂ ಆದರು.
ಬಳಿಕ ವಾದ ಮಂಡನೆಗೆ ಇನ್ನಷ್ಟು ಸಮಯಾವಕಾಶ ಕೇಳಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ ಪರ ವಕೀಲ ಸಿ.ವಿ.ನಾಗೇಶ್, ''ಈಗಾಗಲೇ ಪ್ರಕರಣದಲ್ಲಿ ಮೂವರು ಎಸ್ಪಿಪಿಗಳು ವಾದ ಮಂಡಿಸಿದ್ದಾರೆ. ಮತ್ತೆ ವಾದ ಮಂಡಿಸಲು ಅವಕಾಶ ನೀಡಿದರೆ ತನಗೂ ಪ್ರತಿವಾದ ಮಾಡಲು ಅವಕಾಶ ನೀಡಬೇಕು'' ಎಂದು ಮನವಿ ಮಾಡಿದ್ದರು.
ಸುದೀರ್ಘ ವಾದ - ಪ್ರತಿವಾದ ಆಲಿಸಿದ ನ್ಯಾ.ಸಂತೋಷ್ ಗಜಾನನ್ ಭಟ್ ಅವರು, ಜಾಮೀನು ಅದೇಶ ಬಗ್ಗೆ ಸಾಧ್ಯವಾದರೆ 5 ಗಂಟೆಯೊಳಗೆ ಪ್ರಕಟಿಸುವುದಾಗಿ ತಿಳಿಸಿ, ಆದೇಶ ಕಾಯ್ದಿರಿಸಿದ್ದರು.