ಮೈಸೂರು: "ಚಾಮುಂಡಿ ಬೆಟ್ಟದ ದೇವಾಲಯವನ್ನು ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತಿದೆ. ಆದರೆ ಅದು ಮಹಾರಾಜರಿಗೆ ಸೇರಿದ್ದು. ಚಾಮುಂಡಿ ಬೆಟ್ಟದ ಪ್ರಾಧಿಕಾರವನ್ನು ರಾಜ್ಯ ಸರ್ಕಾರ ಯಾವ ರೀತಿ ಮಾಡಿದೆ ಎಂಬುದನ್ನು ನೋಡಬೇಕು" ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಇಂದು ಮೈಸೂರು ಖಾಸಗಿ ಹೋಟೆಲ್ನಲ್ಲಿ ಫಸ್ಟ್ ಸರ್ಕಲ್ ಒಕ್ಕಲಿಗ ಉದ್ಯಮಿಗಳ ವಾರ್ಷಿಕ ಸಮ್ಮೇಳನ ಹಾಗೂ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಬಳಿಕ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.
ಇದೇ ವೇಳೆ, ತುಂಗಾಭದ್ರಾ ಜಲಾಶಯ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿರುವ ವಿಚಾರವಾಗಿ ಮಾತನಾಡಿ, "ದುರಸ್ಥಿಗೆ ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಹೋಗಿದೆ. ಕೂಡಲೇ ವಿದೇಶಿ ತಜ್ಞರನ್ನು ಕರೆಸಿ ದುರಸ್ಥಿ ಮಾಡಿಸಬೇಕು. ವಿದೇಶಿ ತಜ್ಞರು ನೀರಿನೊಳಗಿನಿಂದ ರಿಪೇರಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ರಾಜ್ಯದ ಎಲ್ಲಾ ಜಲಾಶಯಗಳ ಸಮರ್ಪಕ ನಿರ್ವಹಣೆಗೆ ಸರ್ಕಾರ ಸೂಕ್ತ ಕ್ರಮ ವಹಿಸಬೇಕು" ಎಂದು ಹೇಳಿದರು.
ಮುಂದುವರೆದು ಮಾತನಾಡಿ, "ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅಭ್ಯರ್ಥಿ ಯಾರೆಂಬುದೂ ಇನ್ನೂ ನಿರ್ಧಾರವಾಗಿಲ್ಲ" ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಮೈಸೂರನ್ನು ಬೃಹತ್ ಮಹಾನಗರ ಪಾಲಿಕೆ ಮಾಡಿ: "ಈಗಾಗಲೇ ಮೈಸೂರು ಮಹಾನಗರ ಬೃಹತ್ ಆಗಿ ಬೆಳೆಯುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಆದ್ದರಿಂದ ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸುಮಾರು 2 ಸಾವಿರ ಕೋಟಿ ರೂ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ" ಎಂದು ಇದೇ ಸಂದರ್ಭದಲ್ಲಿ ಜಿ.ಟಿ.ದೇವೇಗೌಡ ತಿಳಿಸಿದರು.
ಇದನ್ನೂ ಓದಿ: 'ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕರೇ ಧಿಕ್ಕಾರ ಹಾಕುವ ಪರಿಸ್ಥಿತಿ ಬರಲಿದೆ' - R Ashok