ಹುಬ್ಬಳ್ಳಿ: "ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿರುವ ಹಿಂದೆ ನನ್ನ ಪಾತ್ರವಿಲ್ಲ" ಎನ್ನುವ ಮೂಲಕ ಹರಿದಾಡುತ್ತಿರುವ ಆರೋಪಗಳಿಗೆ ಸಚಿವ ಜಮೀರ್ ಅಹಮದ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದರ್ಶನ್ ನಾನೂ ಬಹಳ ಆತ್ಮೀಯರು. ಆದರೆ ಈಗ ಅವರು ಜೈಲಿನಲ್ಲಿದ್ದಾರೆ. ನಾನು ಜಿಲ್ಲಾ ಉಸ್ತುವಾರಿ ಮಂತ್ರಿಯೇ ಆಗಿದ್ದರೂ ಜೈಲಿನಲ್ಲಿದ್ದಾಗ ಹೇಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ?. ಪರಪ್ಪನ ಅಗ್ರಹಾರದಲ್ಲಿ ಅವರ ಫೋಟೋ ಸಿಕ್ಕಿರುವುದಕ್ಕೆ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಬರೀ ಜಿಲ್ಲಾ ಉಸ್ತುವಾರಿ ಮಂತ್ರಿ, ಡಿಜಿ ಅಲ್ಲ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ" ಎಂದರು.
37 ಸಾವಿರಕ್ಕೂ ಅಧಿಕ ಮನೆ ಹಂಚಿಕೆ ಭರವಸೆ: "ಸಿದ್ದರಾಮಯ್ಯನವರು ಈ ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ವಸತಿ ಹಂಚಿಕೆಗೆ ಅನುಮತಿ ಕೊಟ್ಟಿದ್ದರು. ಆ ಬಳಿಕ ಬಿಜೆಪಿ ಸರ್ಕಾರ ಒಂದೇ ಒಂದು ಮನೆಯನ್ನೂ ಜನರಿಗೆ ಕೊಡಲಿಲ್ಲ. ಅಷ್ಟೇ ಅಲ್ಲದೇ, ಕೇಂದ್ರ ಸರ್ಕಾರ ವಸತಿ ಕಟ್ಟಿಸಿಕೊಳ್ಳಲು ನೀಡುವ ಹಣದಲ್ಲಿ ವಾಪಸ್ ಜನರಿಂದಲೇ ಜಿಎಸ್ಟಿ ರೂಪದಲ್ಲಿ ವಸೂಲಿ ಮಾಡುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ 940 ಕೋಟಿ ಹಣದಲ್ಲಿ ಕೇವಲ 310 ಕೋಟಿ ರೂ. ಮಾತ್ರ ನೀಡಿದ್ದಾರೆ. ಈ ಬಗ್ಗೆ ಸಿಎಂ ಗಮನಕ್ಕೆ ತರುವ ಕೆಲಸ ಮಾಡಲಾಗಿದೆ" ಎಂದು ಹೇಳಿದರು.
"ಸಿಎಂ ಎರಡು-ಮೂರು ಸಭೆ ನಡೆಸಿ ಫೆಬ್ರವರಿಯಿಂದ ಜನರಿಗೆ ಮನೆ ಕೊಡುವ ಘೋಷಣೆ ಮಾಡಿದ್ದಾರೆ. ಅದರಂತೆ ಈಗಾಗಲೇ ಸುಮಾರು 36,700ಕ್ಕೂ ಹೆಚ್ಚು ಮನೆಗಳನ್ನು ಕೊಟ್ಟಿದ್ದೇವೆ. ಬರುವ ದಿನಗಳಲ್ಲಿ 37 ಸಾವಿರ ಮನೆಗಳನ್ನು ನೀಡುವ ಗುರಿ ಹೊಂದಿದ್ದೇವೆ. ಅಲ್ಲದೇ ಯಾರು ವಸತಿ ರಹಿತರು ಇದ್ದಾರೋ ಅಂಥವರ ಸರ್ವೇ ಕಾರ್ಯ ಕೂಡಾ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸರ್ವರಿಗೂ ಸೂರು ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ" ಎಂದು ಜಮೀರ್ ಭರವಸೆ ನೀಡಿದರು.
ಮುಂದುವರೆದು ಮಾತನಾಡಿ, "ಸಿಎಂ ಸಿದ್ದರಾಮಯ್ಯನವರ ಏಳಿಗೆಯನ್ನು ಸಹಿಸದೇ ಬಿಜೆಪಿಯವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. 8 ತಿಂಗಳ ಹಿಂದೆಯೇ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುವಂತೆ ಮನವಿ ಕೊಟ್ಟರೂ ಸಹ ಈವರೆಗೆ ಅನುಮತಿ ನೀಡಿಲ್ಲ. ಆದರೆ ಇದೀಗ ಏಕಾಏಕಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ. ಇದು ಯಾವ ನ್ಯಾಯ?" ಎಂದು ದೂರಿದರು.
ಸಿಎಂ ಟಗರು, ಹುಲಿ: "ಸಿದ್ದರಾಮಯ್ಯನವರಿಗೆ ಯಾವುದೇ ಭಯವಿಲ್ಲ. ಅವರು ಟಗರು, ಹುಲಿ. ಅವರು ಭಯಪಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಅವರ ಬೆಂಬಲಕ್ಕೆ ರಾಜ್ಯದ ಜನತೆ ನಿಂತಿದ್ದಾರೆ. ಅಷ್ಟೇ ಅಲ್ಲದೇ ಹೈಕಮಾಂಡ್ ಕೂಡಾ ಸಿದ್ದರಾಮಯ್ಯ ಜೊತೆಗಿದೆ" ಎಂದರು.
ಇದನ್ನೂ ಓದಿ: ಎನ್ಡಿಎ ನಾಯಕರ ಪ್ರಾಸಿಕ್ಯೂಷನ್ ಬಗ್ಗೆ ರಾಜ್ಯಪಾಲರಿಗೆ ಲೋಕಾಯುಕ್ತರಿಂದ ಸ್ಪಷ್ಟನೆ: ಪರಮೇಶ್ವರ್ - G Parameshwar