ಕೊಪ್ಪಳ: "ತುಂಗಭದ್ರಾ ಜಲಾಶಯದಲ್ಲಿ ಕಿತ್ತು ಹೋಗಿರುವ 19ನೇ ಕ್ರಸ್ಟ್ ಗೇಟ್ಗೆ ತಾತ್ಕಾಲಿಕ ಗೇಟ್ ಕೂರಿಸುವ ಕೆಲಸ ಇಂದು ಯಶಸ್ವಿಯಾದಲ್ಲಿ, ಕೆಲಸದಲ್ಲಿ ನಿರತರಾದ ಕಾರ್ಮಿಕರಿಗೆ ತಲಾ 50 ಸಾವಿರ ರೂಪಾಯಿ ನೀಡುವುದಾಗಿ" ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.
ಕ್ರಸ್ಟ್ ಗೇಟ್ ಕೂರಿಸಲು ವಿಳಂಬವಾದ ಜಾಗಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದ ಅವರು, ಸ್ಟಾಪ್ ಗೇಟ್ ಕೂಡಿಸುವ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಸ್ಟಾಪ್ ಲಾಗ್ ಗೇಟ್ ಕೂರಿಸಲು ಹರಸಾಹಸ ಪಡುತ್ತಿರುವ ಡ್ಯಾಂ ತಜ್ಞ ಕನ್ನಯ್ಯ ಮತ್ತು ತಜ್ಞರ ತಂಡಕ್ಕೆ ಮತ್ತು ಅವರ ಜೊತೆಗೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಧೈರ್ಯ ತುಂಬಿದರು. ಧೈರ್ಯ ಕಳೆದುಕೊಳ್ಳದೇ ಕೆಲಸ ಮಾಡಿ, ಆದಷ್ಟು ಬೇಗ ಗೇಟ್ ಕೂರಿಸಿ ಕಾರ್ಯ ಯಶಸ್ವಿಯಾಗಲಿ. ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ ರೂ. ಕೊಡುತ್ತೇನೆ ಎಂಬ ಆತ್ಮವಿಶ್ವಾಸದ ಮಾತುಗಳನ್ನು ಸಚಿವ ಜಮೀರ್ ಅಹಮದ್ ಹೇಳಿದರು.