ಬೆಂಗಳೂರು: ರಾಜ್ಯದಲ್ಲಿ 25 ಮಿನಿ ಜವಳಿ ಪಾರ್ಕ್ ಸ್ಥಾಪನೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ್ ತಿಳಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕಾವೇರಿ ಹ್ಯಾಂಡ್ಲೂಮ್ಸ್ ನೇಕಾರರ ಸೇವಾ ಕೇಂದ್ರ ಮತ್ತು ಎಫ್.ಐ.ಸಿ.ಸಿ.ಐ- ಎಫ್.ಎಲ್.ಒ ವತಿಯಿಂದ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ -2024 ಹಾಗೂ ಕೈಮಗ್ಗ ನೇಕಾರರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಜವಳಿ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜವಳಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಿದ್ದೇವೆ. ಜವಳಿ ಘಟಕ ಸ್ಥಾಪಿಸಲು ಅನುದಾನ ನೀಡುತ್ತಿದ್ದೇವೆ. ಕೈಮಗ್ಗ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈಗಾಗಲೇ ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ಕೆಲವರು ನೇಕಾರಿಕೆಯಿಂದ ಹೊರಹೋಗುತ್ತಿದ್ದಾರೆ. ಕಾಲ ಕ್ರಮೇಣ ನೇಕಾರಿಕೆ ಕುಟುಂಬ ಕ್ಷೀಣಿಸುತ್ತಿದೆ. ಹೀಗಾಗಿ ನಮ್ಮ ಸರ್ಕಾರ ಇವರಿಗೆ ಪ್ರೋತ್ಸಾಹ ನೀಡುತ್ತಿದೆ. 80 ಕೋಟಿ ರೂ. ಅನುದಾನ ನೇಕಾರಿಕೆಗೆ ಕೊಡುತ್ತಿದ್ದೇವೆ. ನೇಕಾರರ ಗೌರವಧನ 2ರಿಂದ 5 ಸಾವಿರಕ್ಕೆ ಹೆಚ್ಚಿಸಿದ್ದೇವೆ. ನೇಕಾರರಿಗೆ ಸ್ಮಾರ್ಟ್ ಕಾರ್ಡ್ ನೀಡುತ್ತಿದ್ದೇವೆ. ನೇಕಾರರ ಮಕ್ಕಳ ಉನ್ನತ ಶಿಕ್ಷಣಕ್ಕೆ ಹಣ ನೀಡಲಾಗ್ತಿದೆ. ನೇಕಾರರಿಗೆ ಸಾಲವನ್ನು ನೀಡುವ ಕೆಲಸ ಆಗ್ತಿದೆ. ಶೇ 1ರಿಂದ 3ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದೇವೆ. 150 ಕೋಟಿ ರೂ. ಹಣ ಪವರ್ ಸಬ್ಸಿಡಿಯಾಗಿ ನೀಡುತ್ತಿದ್ದೇವೆ. ಅವರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದು ಸಚಿವರು ಹೇಳಿದರು.

ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿಗೆ ನೀಡುವ ಸಮವಸ್ತ್ರ ಕೈಮಗ್ಗದ ಉಡುಪು ಬಳಕೆ ಮಾಡಬೇಕು. ಆಗ ಕೈಮಗ್ಗದ ಉಡುಪು ತಯಾರಿಕೆಗೆ ಉತ್ತೇಜನ ನೀಡಿದಂತೆ ಆಗುತ್ತದೆ. ಈ ಹಿಂದೆ ಇಂತಹ ಆದೇಶವಿತ್ತು. ಸರ್ಕಾರದ ಇಲಾಖೆಗಳು ಕೈಮಗ್ಗದ ಉಡುಪು ಖರೀದಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಬಾಂಗ್ಲಾ ದೇಶದಲ್ಲಿ ಶೇ 30ರಷ್ಟು ಜವಳಿ ಉತ್ಪಾದನೆಯಾಗುತ್ತಿತ್ತು. ಆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿರುವುದರಿಂದ ಜವಳಿ ಉತ್ಪಾದನೆಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಇದರಿಂದ ಭಾರತದ ಜವಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಅದರ ಲಾಭ ಪಡೆಯಬೇಕು ಎಂದು ಸಚಿವರು ಸಲಹೆ ನೀಡಿದರು.
ವಿಧಾನ ಪರಿಷತ್ನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸರ್ಕಾರ ಕೈಮಗ್ಗದ ಅಭಿವೃದ್ಧಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ವಿವಿಧ ಇಲಾಖೆಗಳ ಸಿಬ್ಬಂದಿಯ ಸಮವಸ್ತ್ರ ಕೈಮಗ್ಗದ ಉಡುಪು ಬಳಸುವುದರಿಂದ ಹೆಚ್ಚಿನ ನೆರವು ಸಿಗುವಂತಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
ರೇಷ್ಮೆ, ಹತ್ತಿ, ಉಣ್ಣೆ, ಕೈಮಗ್ಗ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್ ಅಭಿವೃದ್ಧಿ: ಸಚಿವ ಶಿವಾನಂದ ಪಾಟೀಲ್