ಚಿಕ್ಕೋಡಿ: ಲೋಕಸಭಾ ಚುನಾವಣೆ ಎಂಬುದು ಗ್ರಾಮ ಪಂಚಾಯಿತಿ ಚುನಾವಣೆ ಅಲ್ಲ, ಬೀದಿಯಲ್ಲಿ ಹೋಗುವವರಿಗೆ ಕರೆದು ಟಿಕೆಟ್ ನೀಡುವುದಕ್ಕೆ ಆಗುತ್ತಾ? ಇದೇನು ಸಣ್ಣ ಚುನಾವಣೆನಾ ? 17ವರೇ ಲಕ್ಷ ಮತದಾರರು ಇರುವ ಕ್ಷೇತ್ರವಿದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಬೇರೆಯವರನ್ನು ಚುನಾವಣೆಗೆ ನಿಲ್ಲಿಸಲು ಪ್ರಯತ್ನಿಸಿದ್ದೆವು, ಆದರೆ ಯಾರೂ ಆಸಕ್ತಿ ತೋರಿಸಲಿಲ್ಲ. ಪಕ್ಷ ಹಾಗೂ ಸ್ಥಳೀಯ ಶಾಸಕರು ಒತ್ತಾಯ ಮೇರೆಗೆ ನನ್ನ ಮಗಳು ಪ್ರಿಯಾಂಕಾ ಸ್ಪರ್ಧೆ ಮಾಡಿದ್ದಾರೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಮೀಸಲು ಕ್ಷೇತ್ರ, ಸಾಮಾನ್ಯ ಕ್ಷೇತ್ರಗಳು ಜಾರಕಿಹೊಳಿ ಕುಟುಂಬಕ್ಕೆ ಮಾತ್ರ ಸೀಮಿತವಾಗಿವೆ ಎಂಬ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಕೂಡ ಬೇರೆಯವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದೆವು. ಈ ಭಾಗದಲ್ಲಿ ಯಾರೂ ಕೂಡ ಈ ಚುನಾವಣೆ ಸ್ವರ್ಧೆಗೆ ಆಸಕ್ತಿ ತೋರಲಿಲ್ಲ. ಆದರೆ ಯಾರೂ ಕೂಡ ನಿಲ್ತೀವಿ ಅಂತ ಮುಂದೆ ಬರಲಿಲ್ಲ. ಸ್ಥಳೀಯ ಮುಖಂಡರು ಮತ್ತು ಪಕ್ಷದವರು ನಮ್ಮ ಕುಟುಂಬಕ್ಕೆ ಸ್ಪರ್ಧೆಗೆ ಒತ್ತಾಯ ಮಾಡಿದ್ದರು. ಹೀಗಾಗಿ ನಾವು ಸ್ಪರ್ಧೆ ಮಾಡಿದ್ದೇವೆ ಎಂದು ಅಭಿಮತ ವ್ಯಕ್ತಪಡಿಸಿದರು.
ಯತ್ನಾಳ್ ಆರೋಪ ಮಾಡುವುದು ಸ್ವಾಭಾವಿಕ ಇದಕ್ಕೆ ರಾಜಕೀಯ ಅಂತಾರೆ. ಚುನಾವಣೆ ಸಂದರ್ಭದಲ್ಲಿ ಆರೋಪ ಪ್ರತ್ಯಾರೋಪ ಮಾಡುವುದು ಕಾಮನ್, ಒಬ್ಬರ ಮೇಲೆ ಆರೋಪ ಮಾಡುವುದು ಸಹಜ, ಅದನ್ನ ರಾಜಕೀಯ ಅಂತ ಮಾತ್ರ ನೋಡಬೇಕು ಎಂದು ಹೇಳಿದರು. ಚುನಾವಣೆಯಲ್ಲಿ ಜಾತಿ ಲೆಕ್ಕಕ್ಕೆ ಬರಲ್ಲ. ಚುನಾವಣೆಯಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ಜನ ಮತ ಹಾಕುತ್ತಾರೆ. ಜಾತಿ, ಧರ್ಮ, ಭಾಷೆ ನೋಡಿ ಜನರು ಮತ ಚಲಾಯಿಸುವುದಿಲ್ಲ ಎಂದು ಹೇಳಿದರು.
ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಕೆ: ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರು ಗುರುವಾರ 12 ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ರಾಜ್ಯ ಮುಖಂಡರು ಹಾಗೂ ಕಾರ್ಯಕರ್ತರು ಬರುವುದಿಲ್ಲ ಕೇವಲ 16 ಜನ ಸೇರಿ ನಾಳೆ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ಅತಿ ಸರಳವಾಗಿ ಉಮೇದುವಾರಿಕೆ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದರು.