ಚಿಕ್ಕೋಡಿ(ಬೆಳಗಾವಿ): ಬರಗಾಲದಿಂದ ನಷ್ಟ ಅನುಭವಿಸಿದ ಎರಡು ಲಕ್ಷ ರೈತರಿಗೆ ಬೆಳೆ ಪರಿಹಾರ ಹಣ ವಿತರಿಸಲಾಗಿದೆ. ಇನ್ನೂ ಒಂದು ಲಕ್ಷ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಬೇಕಿದೆ. ಕೇಂದ್ರ ಸರ್ಕಾರದಿಂದ ಹಣ ಬಂದರೆ ನಾವು ಉಳಿದ ರೈತರ ಖಾತೆಗಳಿಗೆ ಹಣ ಜಮಾ ಮಾಡುತ್ತೇವೆ. ಕೇಂದ್ರದಿಂದ ಹಣ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಗುರುವಾರ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೃಷ್ಣಾ ನದಿಯಲ್ಲಿ ಹತ್ತು ದಿನಗಳಿಗಾಗುವಷ್ಟು ನೀರಿದೆ. ಅಭಾವ ಬಿದ್ದರೆ ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುತ್ತೇವೆ. ಈ ಜಲಾಶಯದಲ್ಲಿ ನೀರು ಹೆಚ್ಚಿರುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಕೃಷ್ಣಾ ನದಿ ಸಂಪೂರ್ಣವಾಗಿ ಖಾಲಿ ಆಗುವಷ್ಟರಲ್ಲಿ ಮಹಾರಾಷ್ಟ್ರದಿಂದ ನೀರು ಬಿಟ್ಟರೆ ಅನಕೂಲವಾಗುತ್ತದೆ. ಮಹಾರಾಷ್ಟ್ರ ಸರ್ಕಾರ ನೀರು ಬಿಡುಗಡೆ ಮಾಡದಿದ್ದರೆ ಹಿಡಕಲ್ ಡ್ಯಾಂನಿಂದ ನೀರು ಬಿಡುಗಡೆ ಮಾಡುತ್ತೇವೆ. ಕೃಷ್ಣಾ ನದಿ ನೀರಿನ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗಳ ಹತ್ತಿರ ಮಾತಾಡಿದ್ದೇನೆ ಎಂದರು.
ಅಂಜಲಿ ಕೊಲೆ ಪ್ರಕರಣದ ಬಳಿಕ ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಅಷ್ಟೇ. ಎಲ್ಲದಕ್ಕೂ ರಾಜಕೀಯ ಬಳಸುತ್ತಾರೆ. ಚುನಾವಣೆ ನಡೆದರಷ್ಟೇ ಬಿಜೆಪಿಯವರು ಹೋರಾಟ ಮಾಡತ್ತಾರೆ. ಬೇರೆಯವರಿಗೆ ನ್ಯಾಯ ಕೊಡಿಸಲು ಅವರು ಹೋರಾಟ ನಡೆಸಲ್ಲ. ಜನರು ಬಿಜೆಪಿ ಬಗ್ಗೆ ತಿಳಿದುಕೊಳ್ಳಬೇಕಷ್ಟೇ. ಇನ್ನು ಅಂಜಲಿ ಕೊಲೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಇದನ್ನೂ ಓದಿ: 2026ರ ಜುಲೈ ವೇಳೆಗೆ ಬೆಂಗಳೂರು ನಗರಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರು ಲಭ್ಯ: ರಾಮ ಪ್ರಸಾತ್ ಮನೋಹರ್ - drinking water to Bangalore
ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ವಿಚಾರವಾಗಿ ಮಾತನಾಡಿ, ಪ್ರಜ್ವಲ್ ಬಗ್ಗೆ ಗೃಹ ಮಂತ್ರಿ ಸ್ಪಷ್ಟೀಕರಣ ನೀಡಬೇಕು. ಈ ಕೇಸ್ ಖಾಸಗಿ ವಿಷಯ ಎಂದು ಹೇಳಿದರು.