ಬೆಳಗಾವಿ: ಜಾತಿಗಣತಿ ವರದಿಯನ್ನು ಸರ್ಕಾರ ಸ್ವೀಕಾರ ಮಾಡುವುದು ಬೇರೆ, ಅದನ್ನು ಒಪ್ಪುವುದು ಬೇರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜಾತಿಗಣತಿ ವರದಿ ಸ್ವೀಕರಿಸಿದರೆ ಅದನ್ನು ಒಪ್ಪಿದ ಹಾಗಲ್ಲ. ಅದು ಹಂತ ಹಂತವಾಗಿ ಹೋಗಬೇಕು. ವರದಿಗೆ ಬಹಳಷ್ಟು ದಿನಗಳಿಂದ ವಿರೋಧ ವ್ಯಕ್ತವಾಗಿರುವುದು ಹೊಸದಲ್ಲ. ಸರ್ಕಾರ ಅದನ್ನು ಒಪ್ಪಲು ಇನ್ನೂ ಸಮಯ ಬೇಕಾಗುತ್ತದೆ. ಹಾಗಾಗಿ, ಆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದರು.
ಇದು ಹೊಸ ವರದಿಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಅದು ಹೊಸದೆಂದು ಹೇಳೋಕೆ ಆಗಲ್ಲ. ಹಿಂದೆ ಕಾಂತರಾಜು ಅವರು ಏನು ಸಿದ್ಧಪಡಿಸಿದ್ದರೋ ಅದೇ ವರದಿಯನ್ನು ಜಯಪ್ರಕಾಶ ಹೆಗಡೆ ಮುಂದುವರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಎದ್ದಿರುವ ವಿಚಾರಕ್ಕೆ ಮಾತನಾಡಿ, ಇನ್ನೂ ಅಂಥ ಸಮಸ್ಯೆ ಉದ್ಭವವಾಗಿಲ್ಲ. ಇಂದು ಇದೇ ಉದ್ದೇಶಕ್ಕೆ ಕೆಡಿಪಿ ಸಭೆ ಮಾಡಿದ್ದೇವೆ. ಪಂಚಾಯಿತಿ ಮಟ್ಟದಲ್ಲಿ ಟ್ಯಾಂಕರ್ಗಳಿವೆ. ಎಲ್ಲಿ ಟ್ಯಾಂಕರ್ ಇಲ್ಲ ಅಲ್ಲೆಲ್ಲಾ ತೆಗೆದುಕೊಳ್ಳುವಂತೆ ತಿಳಿಸಿದ್ದೇವೆ. ಬಾಡಿಗೆ ಕೂಡ ತೆಗೆದುಕೊಳ್ಳಲಾಗುವುದು. ಹಾಗಾಗಿ, ಜಿಲ್ಲಾಡಳಿತ ಸಂಪೂರ್ಣವಾಗಿ ತಯಾರಿದೆ ಎಂದು ಜಾರಕಿಹೊಳಿ ಹೇಳಿದರು.
ಲೋಕಸಭೆ ಚುನಾವಣೆಗೆ ತಯಾರಿ ನಡೆಯುತ್ತಿದೆ. ಎಲ್ಲೆಡೆ ಓಡಾಡಿ ಕಾರ್ಯಕರ್ತರು ತಯಾರಿ ಮಾಡುತ್ತಿದ್ದಾರೆ. ಇನ್ನು 15 ದಿನ ಸಮಯವಿದೆ. 10ನೇ ತಾರೀಖಿನೊಳಗೆ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಬಹುದು ಎಂದು ಸಚಿವರು ತಿಳಿಸಿದರು.
ನಿಗಮ ಮಂಡಳಿ ಪೈಕಿ ಬುಡಾ, ಕಾಡಾ ಅಧ್ಯಕ್ಷರ ನೇಮಕಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನು ಬಾಕಿಯಿದ್ದು, ಚರ್ಚಿಸಿ 10ನೇ ತಾರೀಖಿನೊಳಗೆ ಮಾಡಲು ಪ್ರಯತ್ನಿಸುತ್ತೇವೆ. ಇಲ್ಲವಾದರೆ ಲೋಕಸಭೆ ಚುನಾವಣೆ ಮಾಡಿದ ಬಳಿಕವೂ ಆಗಬಹುದು. ಖಾಲಿ ಇರುವ ಆ ಎರಡೂ ಸ್ಥಾನಗಳನ್ನು ಜಿಲ್ಲೆಯವರಿಗೆ ಕೊಡುತ್ತೇವೆ ಎಂದರು.
ಇದನ್ನೂ ಓದಿ: ಜಾತಿಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ: ಸಿಎಂ ಸಿದ್ದರಾಮಯ್ಯ