ಬೆಳಗಾವಿ : ಪರಿಹಾರಕ್ಕೆ ಆಗ್ರಹಿಸಿ ಬೆಳಗಾವಿ ನೀರಾವರಿ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯನ್ನು ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ, ನರಸಿಂಗಪುರ, ಗುಡನಟ್ಟಿ, ಬೀರನಹೊಳಿ ರೈತರು ಕೈಬಿಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಂಧಾನ ಸಭೆ ಯಶಸ್ವಿಯಾಗಿದೆ.
ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರೈತರು ಮತ್ತು ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಸಚಿವರ ಮಾತಿಗೆ ಮನ್ನಣೆ ನೀಡಿರುವ ರೈತರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ. ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಾಸ್ತಿಹೊಳಿ ಗ್ರಾಮಸ್ಥರು ನಿನ್ನೆಯಿಂದ ಧರಣಿ ಮಾಡ್ತಿದ್ದರು. ರೈತರು, ಅಧಿಕಾರಿಗಳ ಮಧ್ಯೆ ಘರ್ಷಣೆ ನಡೆಯುತ್ತಿದೆ. ಭೂಸ್ವಾಧೀನ ಕುರಿತು ಇಬ್ಬರ ಬಳಿ ದಾಖಲೆಗಳು ಬೇರೆ ಬೇರೆ ಇವೆ. ಕೆಲವು ದಾಖಲೆಗಳು ನಷ್ಟ ಆಗಿರಬಹುದು, ಇಲ್ಲ ಕಳೆದಿರಬಹುದು ಎಂದರು.
ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಬೇಡಿಕೆ ಇದೆ. ಸದ್ಯ ವಸ್ತುಸ್ಥಿತಿ ಬರೆಯುತ್ತೇವೆ. ಅಂತಿಮವಾಗಿ ಸರ್ಕಾರ ತೀರ್ಮಾನ ಮಾಡುತ್ತೆ. ಸರ್ಕಾರಕ್ಕೆ ಇರುವ ವಸ್ತುಸ್ಥಿತಿ ಬರೆಯಲು ಅಧಿಕಾರಿಗಳು ಒಪ್ಪಿದ್ದಾರೆ. ಭೂಸ್ವಾಧೀನ ಆಗಿದೆ ಎಂದು ಅಧಿಕಾರಿಗಳು ಹೇಳ್ತಿದ್ದಾರೆ. ಆದರೆ, ಪರಿಹಾರ ಕೊಟ್ಟಿರುವ ದಾಖಲೆ ನಮ್ಮಲ್ಲಿ ಇಲ್ಲ. ಮೂರು ದಿನದಲ್ಲಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ನೀರಾವರಿ ಅಧಿಕಾರಿಗಳು ಮತ್ತು ಎಸ್ಎಲ್ಓ ಜಂಟಿಯಾಗಿ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಈಗ ರೈತರು ಪ್ರತಿಭಟನೆ ವಾಪಸ್ ಪಡೆಯಲು ಒಪ್ಪಿದ್ದು, ಸಂಧಾನ ಯಶಸ್ವಿಯಾಗಿದೆ ಎಂದು ಸತೀಶ ಜಾರಕಿಹೊಳಿ ಹೇಳಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ನೀರಾವರಿ ಇಲಾಖೆ ಎಂ ಡಿ ರಾಜೇಶ ಅಮ್ಮಿನಭಾವಿ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಸಚಿವ ಸತೀಶ್ ಜಾರಕಿಹೊಳಿ