ಧಾರವಾಡ: ಹೈಟೆಕ್ ನರ್ಸರಿ ನಿರ್ಮಾಣಕ್ಕೆ ಸರ್ಕಾರದಿಂದ ಬಿಡುಗಡೆಯಾದ 94 ಲಕ್ಷ ರೂ ಅನುದಾನವನ್ನು ಸರಿಯಾಗಿ ಬಳಸದೇ ಇರುವ ಕುರಿತು ಅರಣ್ಯ ಇಲಾಖೆ ಡಿಎಫ್ಒ ವಿವೇಕ್ ಕವರಿ ವಿರುದ್ಧ ಸಚಿವ ಸಂತೋಷ್ ಲಾಡ್ ಗರಂ ಆದರು.
ಧಾರವಾಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು 4ನೇ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.
ಹೈಟೆಕ್ ನರ್ಸರಿಗೆ ಹಣ ಬಳಕೆ ಮಾಡಿದ್ದೇವೆ ಎಂದ ಡಿಎಫ್ಒಗೆ ಸಚಿವರು, ಹೈಟೆಕ್ ನರ್ಸರಿ ಅಂದ್ರೆ ಸಿಂಗಾಪುರನಾ ಎಂದು ಪ್ರಶ್ನಿಸಿದರು. ಅರಣ್ಯ ಇಲಾಖೆಯ ಯೋಜನೆಗೆ ಹಣ ಬಳಕೆಯಾಗಿರುವ ಬಗ್ಗೆ ಸರಿಯಾದ ಮಾಹಿತಿ ನೀಡಿ ಎಂದು ತಾಕೀತು ಮಾಡಿದರು. ಅಲ್ಲದೇ, ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಪತ್ರ ಬರೆಯಿರಿ ಎಂದು ಸೂಚಿಸಿದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನುದಾನ ಮರಳಿ ಹೋದರೆ ಅಧಿಕಾರಿಗಳ ವೇತನದಲ್ಲೇ ಕಟ್ ಮಾಡಿ ಎಂದು ತಿಳಿಸಿದರು.
ಸಭೆಯ ಆರಂಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕಿರಣ್ಕುಮಾರ್ ಅವರಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು. ಅಧಿಕಾರಿ ಸರಿಯಾಗಿ ಮಾಹಿತಿ ಒದಗಿಸದ ಕಾರಣಕ್ಕೆ ಅಸಮಾಧಾನಗೊಂಡ ಸಚಿವ ಲಾಡ್, ನೀವು ಒಂದು ಇಲಾಖೆಯ ಮುಖ್ಯಸ್ಥರು. ನಿಮ್ಮ ಬಳಿಯೇ ಮಾಹಿತಿ ಇಲ್ಲ ಎಂದರೆ ಹೇಗೆ?. ಪ್ರತಿ ಬಾರಿ ಸಭೆಗೆ ಬರುವಾಗ ಮಾಹಿತಿ ತರಬೇಕು ಎಂದು ಹೇಳಿದರು.
ಈ ರೀತಿ ಸಭೆಗೆ ಅಪೂರ್ಣ ಮಾಹಿತಿಯೊಂದಿಗೆ ಬರುವುದೇಕೆ? ಎಂದ ಸಚಿವರು, ಸಭೆ ಮುಗಿಯುವುದರೊಳಗಾಗಿ ಕೃಷಿ ಇಲಾಖೆಯ ಎಲ್ಲ ಮಾಹಿತಿ ಒದಗಿಸಬೇಕು ಎಂದು ಖಡಕ್ ಆಗಿ ತಿಳಿಸಿದರು.
ಇನ್ನು ಸರ್ಕಾರ ಹಾಲಿನ ದರ ಹೆಚ್ಚಿಸಿರುವುದನ್ನು ಸಮರ್ಥಿಸಿಕೊಂಡ ಲಾಡ್, ದೇಶದಲ್ಲಿ ಏನೇನು ಏರಿಕೆ ಆಗಿದೆಯೋ ಅದರ ಬಗ್ಗೆ ವಿಪಕ್ಷದವರು ಮಾತನಾಡಲ್ಲ. ವಿಪಕ್ಷಗಳ ನಾಯಕರು ರಾಜ್ಯದಲ್ಲಿ ನಾವು ದರ ಹೆಚ್ಚಳ ಮಾಡಿದರ ಬಗ್ಗೆ ಮಾತನಾಡುತ್ತಾರೆ. ಕೇಂದ್ರದಲ್ಲಿ ಕಳೆದ 10 ವರ್ಷದಲ್ಲಿ ಏನೇನು ಹೆಚ್ಚಳವಾಗಿದೆ ಎಂಬುದನ್ನು ಅರಿತು ಅವರು ಮಾತನಾಡಲಿ ಎಂದರು.
ಇದನ್ನೂ ಓದಿ: ಜೋಶಿ ಏನು ಅಭಿವೃದ್ಧಿ ಮಾಡಿದ್ದಾರೆ ಹೇಳಲಿ: ಸಚಿವ ಲಾಡ್ ಪ್ರಶ್ನೆ - Santhosh Lad