ಬೆಳಗಾವಿ: ಮೀಸಲಾತಿಗೆ ಸಂಬಂಧಿಸಿ ಎಲ್ಲರಿಗೂ ಒಪ್ಪುವ ರೀತಿಯಲ್ಲಿ ಸರ್ಕಾರ ತೀರ್ಮಾನ ನೀಡಲಿದೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಅವರು ಬೆಳಗಾವಿ ನಗರದಲ್ಲಿ ಪಂಚಮಸಾಲಿ ಸಮಾಜದ ಮೇಲೆ ಲಾಠಿ ಚಾರ್ಚ್ ವಿಚಾರವಾಗಿ ಮಾತನಾಡಿ, "ಸರ್ಕಾರಿ, ಸಾರ್ವಜನಿಕ ಆಸ್ತಿ ಕಾಪಾಡಿಕೊಳ್ಳುವಂತದ್ದು, ಯಾರಿಗೆ ಕೂಡ ತೊಂದರೆಯಾಗದಂತೆ ನೋಡಿಕೊಂಡು ಜನರಿಗೆ ರಕ್ಷಣೆ ಕೊಡುವಂತದ್ದು, ಯಾವುದೇ ಸರ್ಕಾರ ಇದ್ದರೂ ಕೂಡ ಅವರಿಗೆ ಇರುವಂತ ಮೂಲ ಸದುದ್ದೇಶ. ಸರ್ಕಾರಿ, ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವುದು, ಸಾರ್ವಜನಿಕರಿಗೆ ತೊಂದರೆ ಕೊಟ್ಟಾಗ ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತದೆ. ಆ ಬಗ್ಗೆ ನಾವು ಟೀಕೆ ಮಾಡುವುದು ಸರಿಯಲ್ಲ. ಒಮ್ಮೆ ಎಲ್ಲ ಊಹೆ ಮಾಡಿ, ಪೊಲೀಸರು ಕ್ರಮ ತೆಗೆದುಕೊಳ್ಳದೇ, ಎಲ್ಲಾ ಪ್ರತಿಭಟನಾಕಾರರು ವಿಧಾನಸಭೆಗೆ ನುಗ್ಗಿ ಬಿಟ್ಟಿದ್ದರೆ ಏನು ಆಗುತ್ತಿತ್ತು ಹೇಳಿ. ಅದು ಆಗಬಾರದು ಎನ್ನುವ ಮುನ್ನೆಚ್ಚರಿಕೆಯಿಂದ ಪೊಲೀಸರು ಆ ಕ್ರಮ ತೆಗೆದುಕೊಂಡಿದ್ದಾರೆ" ಎಂದು ಸಚಿವ ರಾಜಣ್ಣ ಲಾಠಿ ಚಾರ್ಜ್ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಮೀಸಲಾತಿ ವಿಚಾರ: ಹಿಂದುಳಿದ ವರ್ಗಗಳಿಂದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಬೇಡಿ ಎಂದು ಸಿಎಂ ಮನವಿ ಪತ್ರ ಕೊಟ್ಟಿರುವ ವಿಚಾರವಾಗಿ ಮಾತನಾಡಿದ ಸಚಿವರು, "ಎಲ್ಲರಿಗೂ ಒಪ್ಪುವ ರೀತಿ ಸರ್ಕಾರ ತೀರ್ಮಾನ ಮಾಡುತ್ತದೆ. ಏನೆಲ್ಲ ಸಲಹೆ ಬರುತ್ತವೆ ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ" ಎಂದು ಪ್ರತಿಕ್ರಿಯಿಸಿದರು.
ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಕಿಡಿ: ವಿಪಕ್ಷ ನಾಯಕ ಆರ್. ಅಶೋಕ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಬಿಜೆಪಿ ತಮ್ಮ ಸರ್ಕಾರದ ಸಮಯದಲ್ಲಿ ಮೀಸಲಾತಿ ಕೊಟ್ಟಿದ್ದೆವು. ಅಲ್ಪಸಂಖ್ಯಾತರಿಗೆ ಈ ದೇಶದ ಕಾನೂನು ಪ್ರಕಾರ ಧರ್ಮ ಆಧಾರಿತ ಮೀಸಲಾತಿ ಕೊಡಲು ಸಾಧ್ಯವಿಲ್ಲ. ಇದು ಸಂವಿಧಾನದಲ್ಲೇ ಇದೆ. ನಾವು ಅದನ್ನು ತೆಗೆದು ಹಾಕಿ ಆ ಮೀಸಲಾತಿಯನ್ನು ಪಂಚಮಸಾಲಿ, ಮರಾಠ ಮತ್ತು ಒಕ್ಕಲಿಗ ಸಮುದಾಯಕ್ಕೆ ನಾವು ಕೊಟ್ಟಿದ್ದೇವೆ. ಆದರೆ ಕಾಂಗ್ರೆಸ್ನವರದ್ದು ವೋಟ್ ಬ್ಯಾಂಕ್ ಪಾಲಿಟಿಕ್ಸ್. ಅವರಿಗೆ ಕರುಣೆ ತೋರಿಸುವ ಮುಖಾಂತರ ಈ ಮೀಸಲಾತಿಯನ್ನು ತಡೆಹಿಡಿದಿದ್ದಾರೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಮಾತುಕತೆಗೆ ಆಹ್ವಾನ ಮಾಡಿದರೂ ಬಿಜೆಪಿ ನಾಯಕರು ಯಾರೂ ಹೋಗಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ಅದೆಲ್ಲ ಸುಳ್ಳು. ಸ್ವಾಮೀಜಿ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾವು ಮನವಿ ಕೊಡಲು ಬರುವಾಗ ನಮ್ಮನ್ನು ತಡೆದು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರೇ ಹೇಳಿದ್ದಾರೆ" ಎಂದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ: ಪೊಲೀಸರಿಂದ ಲಾಠಿ ಪ್ರಹಾರ, ಹಲವರಿಗೆ ಗಾಯ; ಸ್ವಾಮೀಜಿ, ಯತ್ನಾಳ್ ವಶಕ್ಕೆ