ಹಾವೇರಿ: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲ್ಲ ಅಂತ ಬರೆದುಕೊಟ್ಟು ಬಂದವರ ಸಂತತಿಯೇ ಈ ಬಿಜೆಪಿ ಸಂತತಿ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಹಾವೇರಿ ತಾಲೂಕು ಅಗಡಿ ಗ್ರಾಮದಲ್ಲಿ, ಸಂಸದ ಡಿ.ಕೆ ಸುರೇಶ್ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಹಿರಿಯ ನಾಯಕರಿದ್ದಾರೆ. ಅವರು ಏನನ್ನು ಹೇಳ್ತಾರೋ ಅದನ್ನ ನಾವು ಸಂತೋಷದಿಂದ ಸ್ವಾಗತ ಮಾಡುತ್ತೇವೆ. ಆದರೆ ಕೆಲವೊಮ್ಮೆ ಮಾತನಾಡುವ ವೇಳೆ ಈ ಹಿಂದೆ ಸಿದ್ದರಾಮಯ್ಯ ಅವರು ಹೇಳಿದಂತೆ ಈಶ್ವರಪ್ಪ ಅವರ ಮೆದುಳು, ಬಾಯಿಗೂ ಕನೆಕ್ಟಿವಿಟಿ ಇಲ್ಲ ಎಂಬಂತೆ ಮಾತನಾಡುತ್ತಾರೆ. ಇದು ಕೂಡ ಹಾಗೆ ಆಗಿರಬಹುದು ಎಂದು ವ್ಯಂಗ್ಯವಾಡಿದರು.
ತಮ್ಮ ಹೇಳಿಕೆಯನ್ನು ಕಾಂಗ್ರೆಸ್ನವರು ತಿರುಚಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಅವರನ್ನೇ ಕೇಳಬೇಕು. ಈ ರೀತಿ ಯಾಕೆ ಹೇಳಿದಿರಿ? ಅದರ ಅರ್ಥ ಏನು ಎಂದು ಪ್ರಶ್ನಿಸಬೇಕು ಎಂದು ತಿಳಿಸಿದರು. ಜಂತರ್ ಮಂತರ್ ಕಾಂಗ್ರೆಸ್ ಪ್ರತಿಭಟನೆ ರಾಜಕೀಯ ದೊಂಬರಾಟ ಎಂಬ ಬಿಎಸ್ವೈ ಹೇಳಿಕೆ ಬಗ್ಗೆ ಮಾತನಾಡಿ, ರಾಜ್ಯಕ್ಕೆ ಅನ್ಯಾಯ ಆದಾಗ ನೋಡಿಕೊಂಡು ಸುಮ್ನೆ ಕೂರಬೇಕು ಅನ್ನೋದಕ್ಕೆ ಯಡಿಯೂರಪ್ಪ ಬೆಂಬಲನಾ ಎಂದು ಪ್ರಶ್ನಿಸಿದರು. ನಮಗೆ ಅನ್ಯಾಯ ಆಗಿದೆ ಅಂತ ಅಂಕಿ ಅಂಶ ಪ್ರಕಾರ ಹೇಳಿದ್ದಿವಿ. ಇದೆಲ್ಲ ಸುಳ್ಳು ಅಂತ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಸಿಎಂ ಅವರ ಸವಾಲಿಗೆ ಬಿಎಸ್ವೈ ಅವರಿಗೆ ಉತ್ತರ ಕೊಡೋಕೆ ಹೇಳಿ ಎಂದರು.
ದೇಶ ವಿಭಜನೆ ಕುರಿತು ಸಂಸದ ಡಿಕೆ ಸುರೇಶ್ ಹೇಳಿಕೆ ವಿಚಾರಕ್ಕೆ, ಇದಕ್ಕೆ ನಮ್ಮ ಸಹಮತವಿಲ್ಲ. ದೇಶ ಒಗ್ಗಟ್ಟಾಗಿ ಇರಬೇಕು ಅಂತ ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದರು. ಆಪರೇಷನ್ ಬ್ಲೂಸ್ಟಾರ್ ಮಾಡಿದ್ದು ಯಾರು? ಆಪರೇಷನ್ ಬ್ಲೂ ಸ್ಟಾರ್ ಮಾಡದಿದ್ದರೆ ಪಂಜಾಬ್ ರಾಜ್ಯ ನಮ್ಮಲ್ಲಿ ಇರ್ತಾ ಇರಲಿಲ್ಲ. ಅದಕ್ಕಾಗಿ ಇಂದಿರಾಗಾಂಧಿ ಹತ್ಯೆ ಆಯಿತು. ದೇಶಕ್ಕೋಸ್ಕರ ಬಿಜೆಪಿಯವರ ಕೊಡುಗೆ ಏನು? ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲ್ಲ ಎಂದು ಬ್ರಿಟಿಷರಿಗೆ ಬರೆದುಕೊಟ್ಟ ಸಂತತಿಯೇ ಬಿಜೆಪಿಯವರದ್ದು ಎಂದು ಸಚಿವ ರಾಜಣ್ಣ ಆರೋಪಿಸಿದರು. ಡಿಕೆ ಸುರೇಶ್ ಹೇಳಿಕೆಯನ್ನು ನಾವು ಸಮರ್ಥನೆ ಮಾಡಿಕೊಳ್ಳಲ್ಲ. ದೇಶದ ಒಗ್ಗಟ್ಟಿಗೋಸ್ಕರ ನಮ್ಮ ಕಾಂಗ್ರೆಸ್ ಮುಖಂಡರು ತ್ಯಾಗ ಬಲಿದಾನ ಮಾಡಿದ್ದಾರೆ. ಅದು ಉಳಿಯಬೇಕು, ವ್ಯರ್ಥ ಆಗಬಾರದು ಎಂದರು.
ದೇಶದ ಒಗ್ಗಟ್ಟಿಗೆ ಕೆಡಕುಂಟು ಮಾಡುವ ಮಾತು ಯಾರೇ ಆಡಿದ್ರೂ ಅದನ್ನ ನಾವು ಖಂಡಿಸ್ತೇವೆ. ದೇಶದ ವಿಭಜನೆಗೆ ಪೂರಕವಾದ ಮಾತು ಯಾರೇ ಹೇಳಿದರೂ ಅದನ್ನ ನಾವು ಖಂಡಿಸ್ತೇವೆ ಎಂದು ಸಚಿವ ರಾಜಣ್ಣ ತಿಳಿಸಿದರು. ಇನ್ನು ಡಿಸಿಎಂ ಹುದ್ದೆ ಪ್ರಸ್ತಾಪ ವಿಚಾರದ ಬಗ್ಗೆ ಮಾತನಾಡಿದ ಅವರು, ಪಾರ್ಲಿಮೆಂಟ್ ಚುನಾವಣೆ ಗೊಂದಲ ಇದೆ, ಮಾತಾಡಬೇಡಿ ಎಂದು ಅಧ್ಯಕ್ಷರು ಸೂಚನೆ ಕೊಟ್ಟಿದಾರೆ. ಅಧ್ಯಕ್ಷರ ಮಾತಿಗೆ ಮನ್ನಣೆ ನೀಡಿ ನಾನು ಮಾತಾಡಲ್ಲ ಎಂದು ಅವರು ಚುನಾವಣೆ ಬಳಿಕ ನೋಡೋಣ ಎಂದರು. ಐವರು ಗಣ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಲಿಂಗ್ಯಕ್ಯ ಶಿವಕುಮಾರ್ ಸ್ವಾಮೀಜಿ ಅವರು ತ್ರಿವಿಧ ದಾಸೋಹದ ಜೊತೆ ಬಡ ಮಕ್ಕಳಿಗೆ ವಿದ್ಯೆ ನೀಡಿದವರು.
ಅವರಿಗೆ ಭಾರತ ರತ್ನ ಕೊಡಬೇಕು ಅನ್ನೋದು ಮೊದಲಿನಿಂದಲೂ ನಮ್ಮ ಒತ್ತಾಯ ಇದೆ. ಈಗ ಐವರಿಗೆ ಗೌರವ ಕೊಟ್ಟಿದ್ದಾರೆ. ಇಷ್ಟು ವರ್ಷ ಯಾಕೆ ಕೊಡಲಿಲ್ಲ, ಈಗ ಯಾಕೆ ಕೊಟ್ಟರು? ಕರ್ಪೂರಿ ಠಾಕೂರ್ಗೆ ಈಗ ಯಾಕೆ ಕೊಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡು ಒಂಬತ್ತುವರೆ ವರ್ಷವಾಯಿತು. ಆದರೆ ಅವರಿಗೆ ಈಗ ಯಾಕೆ ಭಾರತ ರತ್ನ ಘೋಷಿಸಲಾಲಾಯಿತು ಎಂದು ಸಚಿವ ರಾಜಣ್ಣ ಪ್ರಶ್ನಿಸಿದರು.
ಇದನ್ನೂ ಓದಿ: ಅನುದಾನ ಲೆಕ್ಕ ಕೊಡಿ ಬಿಜೆಪಿ ಅಭಿಯಾನ: ಶಾಸಕ ಅಬ್ಬಯ್ಯ ಪ್ರಸಾದ್ ಟಾಂಗ್