ಬೆಂಗಳೂರು: ನಮ್ಮ ಪರ ನಿಲ್ಲುವ ಸಮುದಾಯ ಯಾವುದು ಅಂತ ನೋಡಿ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ನಿರ್ಧಾರ ಮಾಡುತ್ತೆ ಎಂದು ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, ಬೇರೆ ಬೇರೆ ಸಮುದಾಯದವರು ಸ್ಥಾನ ಕೇಳೋದು ತಪ್ಪಲ್ಲ. ಆದರೆ ನಮ್ಮ ಪರ ನಿಲ್ಲುವ ಸಮುದಾಯ ಯಾವುದು ಅಂತ ನೋಡಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ಹೈಕಮಾಂಡ್ಗೆ ಯಾರಿಗೆ, ಯಾವ ಸಮುದಾಯಕ್ಕೆ ಕೊಡಬೇಕು ಅಂತ ಗೊತ್ತಿದೆ. ಆದರೆ ಬದಲಾವಣೆ ಚರ್ಚೆ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ಏನು ಮಾಡುತ್ತೋ ಗೊತ್ತಿಲ್ಲ. ಶಾಸಕರು, ಮುಖಂಡರು ತಮ್ಮ ಅಭಿಪ್ರಾಯ ಹೇಳ್ತಾರೆ ಇದರಲ್ಲಿ. ಇವರ ಅಭಿಪ್ರಾಯಗಳೂ ಮುಖ್ಯ. ಡಿ.ಕೆ. ಶಿವಕುಮಾರ್ ಅವರು ಎರಡು ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಅದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಿನೂ ಗಮನ ಕೊಡಬೇಕು ಎಂದರು.
ಎರಡು ಹುದ್ದೆಗಳನ್ನು ನಿಭಾಯಿಸುವುದು ಕಷ್ಟ ಎಂಬುದು ಡಿ.ಕೆ.ಶಿವಕುಮಾರ್ಗೂ ಗೊತ್ತು. ಹಾಗಾಗಿ ಹೈಕಮಾಂಡ್ ಸರಿಯಾದ ಸಮಯದಲ್ಲಿ ಬದಲಾವಣೆ ಮಾಡುತ್ತಾರೆ ಎಂಬುದು ಅವರಿಗೆ ಗೊತ್ತು. ಆ ತರ ಏನಾದರೂ ಇದ್ದರೆ ಹೈಕಮಾಂಡ್ ವೀಕ್ಷಕರನ್ನು ಕಳಿಸಿ ಅಭಿಪ್ರಾಯ ಸಂಗ್ರಹ ಮಾಡುತ್ತೆ. ಈಗ ಬಿಜೆಪಿಯಲ್ಲಿ ನಡ್ಡಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ರು. ಈಗ ನಡ್ಡಾ ಸಚಿವರಾಗಿದ್ದಾರೆ, ಅವರ ಸ್ಥಾನಕ್ಕೆ ಬೇರೆಯವರನ್ನು ಕರೆತರುವ ಚರ್ಚೆ ಆಗ್ತಿದೆ. ಇದರಲ್ಲಿ ವಿಶೇಷತೆ ಏನಿಲ್ಲ. ಹೈಕಮಾಂಡ್ಗೆ ಇಲ್ಲಿ ಅಧ್ಯಕ್ಷರನ್ನು ಬದಲಾಯಿಸಬೇಕು ಅಂತ ಅನಿಸಿದರೆ ಬದಲಾಯಿಸ್ತಾರೆ. ನಾವು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿ ಮಾಡಿದ್ದೆವು. ರಾಜಕೀಯವಾಗಿ ಚರ್ಚೆ ಮಾಡಲಾಯಿತು. ಸೌಹಾರ್ದಯುತವಾಗಿ ಚರ್ಚೆ ಮಾಡಲಾಯ್ತು. ಹೆಚ್ಚುವರಿ ಡಿಸಿಎಂ ಬಗ್ಗೆ ಯಾರೂ ಪ್ರಸ್ತಾಪ ಮಾಡಲಿಲ್ಲ ಎಂದರು.
ಹೆಚ್ಚುವರಿ ಡಿಸಿಎಂ ಬಗ್ಗೆ ಅವರವರು ಅವರವರ ಅಭಿಪ್ರಾಯ ಹೇಳ್ತಾರೆ. ಆದ್ರೆ ಎಲ್ಲವೂ ಹೈಕಮಾಂಡ್ಗೆ ಬಿಟ್ಟಿದ್ದು. ಸ್ವಾಮೀಜಿಗಳು ವೇದಿಕೆ, ಸಂದರ್ಭ ನೋಡಿ ಮಾತಾಡಿದ್ರೆ ಒಳ್ಳೆಯದು. ಸ್ವಾಮೀಜಿಗಳ ಹೇಳಿಕೆ ತಪ್ಪು ಅಂತ ಹೇಳಕ್ಕಾಗಲ್ಲ, ಅವರಿಗೂ ಕಾಳಜಿ ಇರಬಹುದು, ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಸಿಎಂ, ಡಿಸಿಎಂ ಹುದ್ದೆಗಳ ವಿಚಾರ ಪ್ರಸ್ತುತ ಅಪ್ರಸ್ತುತ ಅಂತ ಅಲ್ಲ. ಹೈಕಮಾಂಡ್ ನವರು ಆ ತರ ಬದಲಾವಣೆ ಮಾಡೋದಾದರೆ ವೀಕ್ಷಕರನ್ನು ಕಳಿಸಿ ಅಭಿಪ್ರಾಯ ಪಡೆಯುತ್ತಾರೆ ಎಂದರು.
ದೆಹಲಿ ಪ್ರವಾಸ ಯಶಸ್ವಿಯಾಗಿದೆ: ದೆಹಲಿ ಪ್ರವಾಸದ ಬಗ್ಗೆ ಮಾತನಾಡಿ, ಸಿಎಂ, ಡಿಸಿಎಂ ಸೇರಿ ನಾವೆಲ್ಲರೂ ರಾಜ್ಯದ ಎಲ್ಲ ಸಂಸದರು, ಕೇಂದ್ರ ಸಚಿವರ ಸಭೆ ಕರೆದಿದ್ದೆವು. ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನ ಸೆಳೆಯಬೇಕೆಂದು ತಿಳಿಸಿದ್ದೇವೆ. ಈ ಸಂಪ್ರದಾಯ ಮುಂದುವರೆಯಬೇಕು. ಪ್ರತೀ ಅಧಿವೇಶನ ನಡೆದಾಗಲೂ ಈ ತರದ ಸಭೆ ನಡೆಸಲು ಅವರೂ ಹೇಳಿದ್ದಾರೆ. ನಂತರ ನಿತಿನ್ ಗಡ್ಕರಿ ಭೇಟಿ ಮಾಡಲಾಯಿತು. ರಾಜ್ಯದ ಹೆದ್ದಾರಿ ಯೋಜನೆಗಳನ್ನು ಬೇಗ ಬೇಗ ಮುಗಿಸಿಕೊಡಲು ಮನವಿ ಮಾಡಲಾಯಿತು. ರಾಜ್ಯಕ್ಕೆ ಒಂದು ಲಕ್ಷ ಕೋಟಿ ಕೊಡೋದಾಗಿ ಗಡ್ಕರಿ ಭರವಸೆ ನೀಡಿದರು ಎಂದು ಪರಮೇಶ್ವರ್ ತಿಳಿಸಿದರು.
ನಾನು ಪೊಲೀಸ್ ಇಲಾಖೆಯ ಕೆಲ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಕೇಳಿದ್ದೇನೆ. ನಿರ್ಭಯಾ ಯೋಜನೆಯಡಿ ಪ್ರತೀ ಪಟ್ಟಣಕ್ಕೆ ತಲಾ 200 ಕೋಟಿ ರೂ. ಕೊಡಲು ಮನವಿ ಮಾಡಲಾಗಿದೆ. ಆಧುನಿಕ ಬಾಡಿ ಕ್ಯಾಮರಾಗಳನ್ನು ಪೊಲೀಸರಿಗೆ ವಿತರಿಸಲು ಅನುದಾನ ಕೇಳಲಾಗಿದೆ. ಪ್ರಧಾನಮಂತ್ರಿ ಭೇಟಿಯನ್ನು ಮಾಡಿದೆವು. ಮೇಕೆದಾಟು, ಕಳಸಾ ಬಂಡೂರಿ ಯೋಜನೆಗಳಿಗೆ ಅನುಮತಿ ಬೇಗ ಕೊಡಿ ಅಂತ ಮನವಿ ಮಾಡಿದ್ದೇವೆ. ಈ ಹಿಂದೆ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೊಡ್ತೀವಿ ಅಂದಿದ್ರು, ಅದನ್ನು ಕೇಳಿದ್ದೇವೆ. ರಾಜ್ಯಕ್ಕೆ ಅನ್ಯಾಯ ಆಗಿದೆ ಅಂತ ಏನೂ ಪ್ರಸ್ತಾಪ ಮಾಡಲಿಲ್ಲ. ನಮ್ಮ ಪ್ರಸ್ತಾವನೆಗಳನ್ನು ಕೇಂದ್ರದ ಮುಂದಿಟ್ಟಿದ್ದೇವೆ. ನಮ್ಮ ದೆಹಲಿ ಪ್ರವಾಸ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಡಿಸಿಎಂ ವಿಚಾರವಾಗಿ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಅಧ್ಯಕ್ಷರಿಗೆ ಬಿಟ್ಟಿದ್ದು. ಇದೆಲ್ಲ ಸೂಕ್ಷ್ಮವಾದ ವಿಚಾರ. ಅವರಿಗೆ ಗೊತ್ತಿರುತ್ತದೆ ಯಾವ ರೀತಿ ಹ್ಯಾಂಡಲ್ ಮಾಡಬೇಕು ಅಂತ. ನನ್ನ ಅವಧಿಯಲ್ಲಿ ಕೂಡ ಆತರ ಪರಿಸ್ಥಿತಿ ಬಂದಿತ್ತು. ಅದನ್ನು ಯಾವ ರೀತಿ ನಿಭಾಯಿಸಬೇಕು ಅಂತ ಅವರಿಗೆ ಗೊತ್ತಿರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಂತಹ ಧೀಮಂತ ಮುಖ್ಯಮಂತ್ರಿ ಯಾರೂ ಇಲ್ಲ : ಜಯದೇವ್ ನಾಯ್ಕ್ - Jayadev Naik