ಶಿರಸಿ (ಉತ್ತರ ಕನ್ನಡ) : ಕಳೆದ 15 ದಿನಗಳಿಂದ ಚರ್ಚೆಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದ ಅಂಗನವಾಡಿ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭಾನುವಾರ ಭೇಟಿ ನೀಡಿದ್ದರು. ಗೌರಿ ನಾಯ್ಕ ತೋಡುತ್ತಿರುವ ಬಾವಿಯನ್ನು ವೀಕ್ಷಿಸಿ, ಇನ್ಮುಂದೆ ಬಾವಿ ತೋಡದಂತೆ ಮತ್ತು ಸರ್ಕಾರದಿಂದ ಬಾವಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದರು.
ಗಣೇಶ ನಗರದಲ್ಲಿ ಅಂಗನವಾಡಿ ಮಕ್ಕಳಿಗೆ ಕುಡಿಯಲು ನೀರಿನ ಸಮಸ್ಯೆ ಇದೆ ಎಂಬ ಕಾರಣಕ್ಕಾಗಿ ಅಲ್ಲಿಯವರೇ ಆದ ಗೌರಿ ನಾಯ್ಕ ಬಾವಿ ತೋಡಲು ಮುಂದಾಗಿದ್ದರು. ಆದರೆ ಅದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುಮತಿ ಪಡೆಯದ ಕಾರಣ ಸಾಕಷ್ಟು ಗೊಂದಲ ಉಂಟಾಗಿತ್ತು. ಬಳಿಕ ಅಂತಿಮವಾಗಿ ಬಾವಿ ತೋಡಲು ಮೌಖಿಕವಾಗಿ ಅನುಮತಿ ನೀಡಿದ್ದರು. ಶಾಸಕ ಭೀಮಣ್ಣ ನಾಯ್ಕ ಸಹ ಮುತುವರ್ಜಿ ವಹಿಸಿದ್ದರು.
ಈ ಹಿನ್ನೆಲೆಯಲ್ಲಿ ಮಂಕಾಳು ವೈದ್ಯ ಸ್ಥಳಕ್ಕೆ ಭೇಟಿ ನೀಡಿ, ಕುಡಿಯುವ ನೀರಿಗೆ ಅಗತ್ಯವಿರುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅಲ್ಲದೇ ಬಾವಿಯ ಅಗಲ ಸಣ್ಣದಾಗಿರುವ ಕಾರಣ ಉಸಿರು ಗಟ್ಟುವ ಸಾಧ್ಯತೆಯಿದ್ದು, ಇಲ್ಲಿಗೆ ಬಾವಿ ತೋಡುವ ಕೆಲಸವನ್ನು ಕೈಬಿಡುವಂತೆ ಮನವಿ ಮಾಡಿದರು. ಅಲ್ಲದೆ, ಬಾವಿ ತೋಡುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂಬ ಭರವಸೆ ನೀಡಿದರು.
ಆದರೆ ಗೌರಿ ನಾಯ್ಕ, ' ನೀರು ಕೊಡುವುದು ನನ್ನ ಉದ್ದೇಶ. ಒಮ್ಮೆ ನೀರು ಬಂದ ನಂತರ ಯಾರು ಏನು ಬೇಕಾದರೂ ಅಭಿವೃದ್ಧಿ ಮಾಡಲಿ' ಎಂದರು. ಇದೇ ವೇಳೆ ಗೌರಿ ನಾಯ್ಕ ಅವರನ್ನು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮತ್ತು ಮಂಕಾಳು ವೈದ್ಯ ಸನ್ಮಾನಿಸಿದರು. ಹೆಬ್ಬಾರ್ ಅವರು ಅಂಗನವಾಡಿಗೆ ಕಂಪೌಂಡ್ ನಿರ್ಮಾಣ ಹಾಗೂ ರಸ್ತೆಯನ್ನು ನಿರ್ಮಿಸಿ ಕೊಡುತ್ತಿದ್ದು, ಈ ಕಾರ್ಯವನ್ನು ಸಚಿವರು ಶ್ಲಾಘಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಕಾಳು ವೈದ್ಯ, ಸರ್ಕಾರದಲ್ಲಿ ಅನುದಾನ ಸಾಕಷ್ಟಿದೆ. ಇತಿಹಾಸದಲ್ಲೇ ದೊಡ್ಡ ಬಜೆಟ್ ಮಂಡನೆ ಮಾಡಲಾಗಿದೆ. ಆದರೂ ಅಂಗನವಾಡಿ, ಶಾಲೆಗಳಿಗೆ ನೀರು ಕೊಡಲು ಸಾಧ್ಯವಾಗದ್ದಿದ್ದರೇ ಹೇಗೆ? ನಾವು ಆ ಜವಾಬ್ದಾರಿ ತೆಗೆದುಕೊಂಡು ಬಾವಿ ನಿರ್ಮಾಣ ವ್ಯವಸ್ಥೆ ಮಾಡುತ್ತೇವೆ. ಗೌರಿ ಅವರಿಗೂ ಇಲ್ಲಿಗೆ ಕೆಲಸ ನಿಲ್ಲಿಸಲು ವಿನಂತಿ ಮಾಡುತ್ತೇವೆ. ಅವರೂ 100 ವರ್ಷ ಬದುಕಿ, ಅವರ ಜೀವನ ಇತರರಿಗೆ ಮಾದರಿ ಆಗಬೇಕು ಎಂದರು.
ಇದನ್ನೂ ಓದಿ : 'ಭಗೀರಥ ಮಹಿಳೆ' ಗೌರಿಗೆ ಬಾವಿ ತೋಡಲು ಎದುರಾದ ಅಡೆತಡೆ ನಿವಾರಣೆ; ಅಂಗನವಾಡಿ ಮಕ್ಕಳಿಗೆ ಸಿಗಲಿದೆ ಜೀವಜಲ