ಬೆಳಗಾವಿ: ಬಿಜೆಪಿ ಶಾಸಕ ಮುನಿರತ್ನ ಅವರ ಬಂಧನದ ಹಿಂದೆ ಯಾವುದೇ ದ್ವೇಷ ರಾಜಕಾರಣವಿಲ್ಲ. ಮಾಡಿದ್ದುಣ್ಣೋ ಮಾರಾಯ ಎಂಬ ಸ್ಥಿತಿ ಅವರಿಗೀಗ ಬಂದೊದಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಲೇವಡಿ ಮಾಡಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಮುನಿರತ್ನ ಅವರ ವಿಚಾರದಲ್ಲಿ ಯಾರು ದ್ವೇಷ ರಾಜಕಾರಣ ಮಾಡುತ್ತಾರೆ?. ಅವರು ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ನಾಯಕರೇನು ಮುನಿರತ್ನ ಅವರಿಗೆ ಕೆಟ್ಟ ಮಾತುಗಳಿಂದ ಬೈಯಿರಿ ಅಥವಾ ಬ್ಲಾಕ್ಮೇಲ್ ಮಾಡಿ ಎಂದು ಹೇಳಿದ್ದಾರಾ? ಎಂದು ಪ್ರಶ್ನಿಸಿದರು.
ಕೆಲ ರಾಜಕಾರಣಗಳು ಮೊದಲು ಕೆಟ್ಟದಾಗಿ ಮಾತನಾಡುತ್ತಾರೆ. ಆಮೇಲೆ ತಿರುಚಿದ್ದಾರೆ, ದ್ವೇಷದ ರಾಜಕಾರಣ ಎಂದೆಲ್ಲ ಹೇಳುತ್ತಾರೆಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಕೆಲವೊಬ್ಬರು ಮಾತನಾಡುತ್ತಾರೆ ನಿಜ. ಆದರೆ, ಅದನ್ನು ಪ್ರಮಾಣೀಕರಿಸಿ ನೋಡಬೇಕು. ಆದರೆ, ಮುನಿರತ್ನ ವಿಚಾರದಲ್ಲಿ ಏನಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದಕ್ಕೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ. ಮುನಿರತ್ನ ಅವರು ಮಹಿಳೆಯರ ಬಗ್ಗೆ ಆಡಿರುವ ಕೀಳು ಮಾತುಗಳನ್ನು ಯಾರೂ ಕೂಡ ಸಹಿಸಲು ಸಾಧ್ಯವಿಲ್ಲ. ಜಾತಿ, ಜಾತಿಗಳ ಮಧ್ಯೆ ಸಂಘರ್ಷ ತರುವಂತಹ ಮಾತುಗಳನ್ನು ಯಾರೂ ಕೂಡ ಆಡಬಾರದು ಎಂದು ಹೇಳಿದರು.
ದೇಶದಲ್ಲಿ ಕಾನೂನು ಇದೆ ಎಂಬುದಕ್ಕೆ ಇದೊಂದು ಉದಾಹರಣೆ: ಮತ್ತೊಂದೆಡೆ, ಶಾಸಕ ಮುನಿರತ್ನ ಬಂಧನದ ಕುರಿತು ಶಿವಮೊಗ್ಗದಲ್ಲಿ ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ನಮ್ಮ ದೇಶದಲ್ಲಿ ಕಾನೂನು ಇದೆ ಎಂಬುದಕ್ಕೆ ಇದೊಂದು ಉದಾಹರಣೆ. ಶಾಸಕರು, ಮಂತ್ರಿಗಳು ಯಾರೇ ಇರಬಹುದು. ಕಾನೂನು ಏನು ಹೇಳಿದೆಯೋ ಅದನ್ನು ಮಾಡುವ ಕೆಲಸವನ್ನು ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ನಾಗಮಂಗಲ ಗಲಭೆ ಹಿಂದೆ ಸರ್ಕಾರದ ಕೈವಾಡವಿದೆ ಎಂಬ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರಿಗೆ ಮಾಡಲು ಏನೂ ಕೆಲಸವಿಲ್ಲ. ಇಂತಹ ಹೇಳಿಕೆ ನೀಡಿ ಪ್ರಚೋದನೆ ಕೊಡುತ್ತಿರುವವರು ಯಾರು?. ಜನಪ್ರತಿನಿಧಿಗಳು ಒಂದು ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ. ಗಲಭೆಯಾದ ಸ್ಥಳಕ್ಕೆ ಹೋದಾಗ ಶಾಂತಿ ಕಾಪಾಡುವ ಬಗ್ಗೆ ಮಾತನಾಡಬೇಕೇ ಹೊರತು ಬೇರೆಯವರ ಮೇಲೆ ಆರೋಪ ಮಾಡುವುದಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಶಾಸಕ ಮುನಿರತ್ನ ಅವರದ್ದೇ ಆಡಿಯೋ ಎಂದು ಖಚಿತವಾದರೆ ಕಾನೂನು ಕ್ರಮ: ಸಚಿವ ಜಿ. ಪರಮೇಶ್ವರ್ - G Parameshwara