ಹುಬ್ಬಳ್ಳಿ: ನೇಹಾ ಹಾಗೂ ಅಂಜಲಿ ಹತ್ಯೆ ಸಮಾಜಕ್ಕೆ ಒಳ್ಳೆಯ ವಿಚಾರವಲ್ಲ. ಈ ಕುರಿತಾಗಿ ಸಿಎಂ ಮತ್ತು ಗೃಹ ಸಚಿವರಿಗೆ ವಿಶೇಷ ನ್ಯಾಯಾಲಯ ಮಾಡಲು ಹಾಗೂ ಸಿಐಡಿಗೆ ಪ್ರಕರಣವನ್ನು ವಹಿಸಲು ಆಗ್ರಹಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಹೇಳಿದರು.
ನಗರದ ವೀರಾಪೂರ ಓಣಿಯಲ್ಲಿರುವ ಹತ್ಯೆಯಾದ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಎರಡು ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜಘಾತುಕ ಕೆಲಸ ಮಾಡುವ ಇಂತಹ ಯುವಕರ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕಿದೆ. ಮೊದಲೇ ದೂರು ಕೊಟ್ಟಿದ್ದರೂ ಕೂಡಾ ಕ್ರಮ ಕೈಗೊಂಡಿಲ್ಲ ಎಂದು ಅಂಜಲಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವಿಚಾರವಾಗಿ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದಲ್ಲಿ ಯಾವ ಅಧಿಕಾರಿಯನ್ನೂ ರಕ್ಷಿಸುವುದಿಲ್ಲ ಎಂದು ಹೇಳಿದರು.
ಡ್ರಗ್ಸ್, ಗಾಂಜಾ ನಗರದಲ್ಲಿ ಅವ್ಯಾಹತವಾಗಿ ಸರಬರಾಜು ಆಗುತ್ತಿದೆ ಎಂದು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಡ್ರಗ್ಸ್ ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಇದೆ. ಇದನ್ನು ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಮಹತ್ವದಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದ್ರೆ ಇದಕ್ಕೆ ಕಡಿವಾಣ ಹಾಕಬಹುದು ಎಂದರು. ಪೊಲೀಸ್ ವೈಫಲ್ಯ ಕಾರಣ ಎಂಬ ಕಾರಣಕ್ಕೆ ಅಮಾನತು ಪರಿಹಾರವಲ್ಲ. ಸದ್ಯದಲ್ಲಿ ಗೃಹ ಸಚಿವರು ನಗರಕ್ಕೆ ಬರುವರಿದ್ದಾರೆ. ಆಗ ಇದರ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.
ಇದೇ ವೇಳೆ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ನಾವು ಇಂತಹ ಘಟನೆಯನ್ನ ಖಂಡಿಸುತ್ತೇನೆ. ಈಗಾಗಲೇ ಎರಡು ಪ್ರಕರಣಗಳು ನಡೆದಿದೆ. ಡ್ರಗ್ಸ್ ವಿಚಾರವಾಗಿ ನಾನು ಮೊದಲು ತೆಗೆದುಹಾಕಬೇಕು ಅಂತ ಮೊದಲಿಂದ ಹೇಳಕೊಂಡಿ ಬಂದಿದ್ದೇನೆ. ಅದನ್ನ ತಡೆಗಟ್ಟಲು ನಾನು ಹಲವಾರು ಬಾರಿ ಇಲಾಖೆ ಮೀಟಿಂಗ್ ಮಾಡಿದ್ದೇನೆ. ನಾನು ಕೊಲೆಯಾದ ಸಂದರ್ಭದಲ್ಲಿ ಬಂದಿಲ್ಲ ಅಂತ ಟೀಕೆ ಮಾಡ್ತಿದ್ದಾರೆ. ನಾನು ಫೋಟೋ ಪೋಸ್ಗೆ ಬರೋ ಅವಶ್ಯಕತೆಯಿಲ್ಲ. ನಮ್ಮದು ಬೇರೆ ಅಫಿಶೀಯಲ್ ಕೆಲಸ ಇತ್ತು. ಹೀಗಾಗಿ ಬರಲು ಆಗಿಲ್ಲ. ಇಂತಹ ಘಟನೆಯಾದಾಗ ಫೋಟೋ ಪೋಸ್ ಬರುವ ಅವಶ್ಯಕತೆ ಇಲ್ಲ ಅಂತ ಶಾಸಕ ಅಬ್ಬಯ್ಯ ಉತ್ತರ ನೀಡಿದರು.
ಈ ಕೇಸ್ನಲ್ಲಿ ಯಾರ ಯಾರ ಹರಿಕಥೆ ಇದೆ ಗೊತ್ತಾಗುತ್ತದೆ. ಈಗಾಗಲೇ ತನಿಖೆ ನಡೆಯುತ್ತಿದೆ. ಎಲ್ಲವೂ ಹೊರ ಬರಲಿದೆ. ಸೋಮವಾರ ಗೃಹಸಚಿವರು ಹುಬ್ಬಳ್ಳಿಗೆ ಬರುತ್ತಾರೆ ಅಂತ ಹೇಳಿದ್ದಾರೆ ಎಂದರು.
ಅಂಜಲಿ ಕುಟುಂಬಕ್ಕೆ ನೆರವಾದ ಲಾಡ್: ಹತ್ಯೆಗೀಡಾದ ಅಂಜಲಿ ಕುಟುಂಬಕ್ಕೆ ಭೇಟಿ ನೀಡಿದ ಲಾಡ್ ಅವರು ತಮ್ಮ ಫೌಂಡೇಶನ್ನಿಂದ 2 ಲಕ್ಷ ರೂ. ಚೆಕ್ ನೀಡಿದರು. ಮೃತ ಅಂಜಲಿ ಅಜ್ಜಿ ಗಂಗಮ್ಮ ಹಾಗೂ ತಂಗಿಯರಿಗೆ ಚೆಕ್ ನೀಡಿ ಸಾಂತ್ವನ ಹೇಳಿದರು.
ತರಾಟೆ ತಗೆದುಕೊಂಡ ಜನ: ಅಂಜಲಿ ಹತ್ಯೆ ಪ್ರಕರಣವಾಗಿ ಮೂರು ದಿನಗಳ ನಂತರ ಸಂತ್ರಸ್ತೆ ಮನೆಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಂತೋಷ್ ಲಾಡ್, ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿದರು. ಈ ವೇಳೆ, ಇಬ್ಬರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು, ಈಗ ಯಾಕೆ ಬಂದಿದ್ದಿರಿ.. ಇಷ್ಟು ದಿನ ಏನು ಮಾಡಿದ್ರಿ ಅಂತ ಆಕ್ರೋಶ ಹೊರ ಹಾಕಿದರು. ಇದರಿಂದ ಕೆಲ ಕಾಲದ ನಾಯಕರು ಮುಜುಗರಕ್ಕೆ ಒಳಗಾಗಬೇಕಾಯಿತು.
ಓದಿ: ಬೆಳಗಾವಿ: ರೈಲಿನಲ್ಲಿ ಚಾಕು ಇರಿತ ಪ್ರಕರಣ, ಸಿಸಿ ಕ್ಯಾಮರಾದಲ್ಲಿ ಆರೋಪಿ ಸೆರೆ; ರೇಖಾಚಿತ್ರ ಬಿಡುಗಡೆ - STABBING CASE