ಬೆಂಗಳೂರು: ಉತ್ತರಖಾಂಡದಲ್ಲಿ ಸಿಲುಕಿ ರಕ್ಷಿಸಲ್ಪಟ್ಟಿರುವ ಕರ್ನಾಟಕ ಚಾರಣಿಗರ ಜೊತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಡೆಹ್ರಾಡೂನ್ನಲ್ಲಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಡೆಹ್ರಾಡೂನ್ ಅತಿಥಿ ಗೃಹದಲ್ಲಿ ತಂಗಿರುವ ಎಂಟು ಮಂದಿ ಚಾರಣಿಗರ ಜೊತೆ ಸಚಿವರು ಸಂಭಾಷಣೆ ನಡೆಸಿದರು. ಅವರ ಆರೋಗ್ಯ ಸ್ಥಿತಿ ಸಹಜವಾಗಿದೆ. ನಾಳೆ ಮತ್ತೆ ಐವರು ಚಾರಣಿಗರು ಡೆಹ್ರಾಡೂನ್ಗೆ ತಲುಪಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸಚಿವರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. 9 ಮೃತದೇಹಗಳನ್ನು ಡೆಹ್ರಾಡೂನ್ಗೆ ತರಲು ಸ್ಥಳೀಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಆದಷ್ಟು ಬೇಗ ಮೃತದೇಹಗಳನ್ನು ಬೆಂಗಳೂರಿಗೆ ತರಲು ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
![TTARAKHAND TREKKING TRAGEDY](https://etvbharatimages.akamaized.net/etvbharat/prod-images/05-06-2024/kn-bng-07-krishnabairegowda-treckers-script-7201951_05062024215806_0506f_1717604886_637.jpg)
ಚಾರಣಿಗರ ವಿವರ: ಸೌಮ್ಯ ಕಾನಲೆ, ಸ್ಮೃತಿ ದೊಲಸ್, ಶೀನಾ ಲಕ್ಷ್ಮಿ, ಶಿವ ಜ್ಯೋತಿ, ಅನಿಲ್ ಭಟ್ಟ, ಭರತ್ ಬೊಮ್ಮನಗೌಡರ್, ಮಧು ಕಿರಣ್ ರೆಡ್ಡಿ, ಜಯಪ್ರಕಾಶ್ ಈಗಾಗಲೇ ಡೆಹ್ರಾಡೂನ್ಗೆ ಕಳುಹಿಸಲಾದ ಚಾರಣಿಗರಾಗಿದ್ದಾರೆ. ಎಸ್.ಸುಧಾಕರ್, ವಿನಯ್, ವಿವೇಕ್ ಶ್ರೀಧರ್, ನವೀನ್, ರಿತ್ತಿಕ ಜಿಂದಾಲ್ ಡಂಬುವರು ರಕ್ಷಿಸಲ್ಪಟ್ಟ ಚಾರಣಿಗರಾಗಿದ್ದಾರೆ. ಅವರನ್ನು ಡೆಹ್ರಾಡೂನ್ ಅತಿಥಿ ಗೃಹಕ್ಕೆ ಕಳುಹಿಸಬೇಕಾಗಿದೆ. ಇನ್ನು ಸಿಂದೆ ವಾಕೆಕಲಮ್, ಆಶಾ ಸುಧಾಕರ್, ಸುಜಾತ ಮುಂಗುರ್ವಾಡಿ, ವಿನಾಯಕ್ ಮುಂಗುರ್ವಾಡಿ ಹಾಗೂ ಚಿತ್ರ ಪ್ರಣೀತ್ ಎಂಬುವರು ಮೃತ ದುರ್ದೈವಿಗಳಾಗಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.
ಇದನ್ನೂ ಓದಿ: ಉತ್ತರಾಖಂಡ್ ಟ್ರೆಕ್ಕಿಂಗ್ ದುರಂತ: ಬೆಂಗಳೂರಿನ 9 ಚಾರಣಿಗರು ಸಾವು, 11 ಜನರ ರಕ್ಷಣೆ - TREKKING TRAGEDY
ಉತ್ತರಾಖಂಡದ ಸಹಸ್ತ್ರತಾಲ್ ಪರ್ವತಾರೋಹಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟಿರುವವರ ಮೃತದೇಹಗಳನ್ನು ಕುಟುಂಬದವರಿಗೆ ತಲುಪಿಸುವ ಮತ್ತು ರಕ್ಷಿಸಲ್ಪಟ್ಟಿರುವ ಉಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಿಳಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೆಹ್ರಾಡೋನ್ನಲ್ಲಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ರಕ್ಷಿಸಲ್ಪಟ್ಟ ಚಾರಣಿಗರ ಜೊತೆ ದೂರವಾಣಿ ಮೂಲಕ ಮಾತನಾಡಿದರು.