ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಂಚಿಕೆಯ ಹಿಂದಿರುವವರು ಯಾರು ಎಂಬುದು ತನಿಖೆ ಸಂಪೂರ್ಣವಾದ ನಂತರ ತಿಳಿಯಲಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಮಾದಕ ವಸ್ತು ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನದ ಪ್ರಯುಕ್ತ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾದ ಅವರು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಿಂದಿರುವವರು ಯಾರು ಎಂಬುದರ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ. ಸದ್ಯದ ಮಟ್ಟಿಗೆ ನಮಗೆ ಲಭ್ಯ ಇರುವ ಮಾಹಿತಿಯನ್ನು ಈಗಲೇ ಹಂಚಿಕೊಳ್ಳಲು ಸಾಧ್ಯವಿಲ್ಲ. ಸಂಪೂರ್ಣ ತನಿಖೆ ಮುಗಿದ ಬಳಿಕ ಎಲ್ಲರಿಗೂ ತಿಳಿಯಲಿದೆ ಎಂದು ತಿಳಿಸಿದರು.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕತ್ವವನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿರುವುದು ಸಂತಸ ತಂದಿದೆ ಎಂದು ಇದೇ ಸಂದರ್ಭದಲ್ಲಿ ಗೃಹ ಸಚಿವರು ತಿಳಿಸಿದರು. ರಾಹುಲ್ ಗಾಂಧಿಯವರು ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿರುವುದು ವೈಯಕ್ತಿಕವಾಗಿ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ನ್ಯೂನ್ಯತೆಗಳ ಕುರಿತು ಹೆಚ್ಚು ಮಾತನಾಡಲಿದ್ದಾರೆ. ದೇಶಕ್ಕೆ ಹೆಚ್ಚು ಸಂದೇಶಗಳನ್ನು ಅವರು ಕೊಡಲಿದ್ದಾರೆ ಎಂದು ಭಾವಿಸುತ್ತೇನೆ ಎಂದರು.