ಮಂಗಳೂರು: ಭಾರೀ ಮಳೆಯಿಂದ ಮುಳುಗಡೆಯಾದ ಮಂಗಳೂರಿನ ವಿವಿಧ ಸ್ಥಳಗಳಿಗೆ ಸಚಿವ ದಿನೇಶ್ ಗುಂಡೂರಾವ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದ್ಯಪಾಡಿಗೆ ಸಚಿವರು ಭೇಟಿ ನೀಡಿದಾಗ, ಅಕ್ಕಪಕ್ಕದ ಗ್ರಾಮಗಳು ಜಲಾವೃತವಾಗಿರುವ ಬಗ್ಗೆ ಸ್ಥಳೀಯರು ಚರ್ಚಿಸಿದರು. ಪ್ರತೀ ವರ್ಷ ಫಲ್ಗುಣಿ ನದಿಯ ಪ್ರವಾಹದ ಬಗ್ಗೆ ಮಾಹಿತಿ ನೀಡಿದರು.
ತೋಟ, ಗದ್ದೆಗಳು ಮುಳುಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಗುಂಡೂರಾವ್ ಸೂಚನೆ ನೀಡಿದರು. ಅದ್ಯಪಾಡಿಯ ಅಕ್ಕಪಕ್ಕದ ಹಳ್ಳಿಗಳಿಗೆ ಪಲ್ಗುಣಿ ನದಿ ನೆರೆ ಹಾವಳಿ ತಡೆಯಲು, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರಿಂದ ವರದಿ ಪಡೆದು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ನೆರೆ ಪರಿಹಾರ ಪಡೆಯಲು ನಿರಾಕರಣೆ: ಸಚಿವರ ಭೇಟಿ ವೇಳೆ ಶಾಶ್ವತ ಪರಿಹಾರ ಒದಗಿಸುವಂತೆ ಅದ್ಯಪಾಡಿ ನಿವಾಸಿಗಳು ನೆರೆ ಪರಿಹಾರ ಪಡೆಯಲು ನಿರಾಕರಿಸಿದ ಘಟನೆಯೂ ನಡೆಯಿತು. ಈ ವೇಳೆ ಸಚಿವ ಗುಂಡೂರಾವ್, "ನೆರೆ ಪರಿಹಾರಕ್ಕೂ ಶಾಶ್ವತ ಪರಿಹಾರಕ್ಕೂ ಸಂಬಂಧವಿಲ್ಲ. ನೆರೆ ಪರಿಹಾರ ಪಡೆದರೆ ಶಾಶ್ವತ ಪರಿಹಾರ ಆಗಲ್ಲ ಎಂಬ ಭಾವನೆ ಬೇಡ. ಒಂದಕ್ಕೊಂದು ಲಿಂಕ್ ಮಾಡುವ ಅಗತ್ಯವಿಲ್ಲ" ಎನ್ನುತ್ತಾ ಮನವರಿಕೆ ಮಾಡಿದರು.
"ಭತ್ತದ ಗದ್ದೆ ತೋಟ ಮುಳುಗಡೆಯಿಂದ ನಷ್ಟ ಅನುಭವಿಸಿದ್ದೀರಿ, ಅದಕ್ಕೆ ಸರ್ಕಾರದಿಂದ ಸಿಗುವ ನೆರೆ ಪರಿಹಾರವನ್ನು ಪಡೆಯಿರಿ. ಪಲ್ಗಣಿ ನದಿಯಿಂದಾಗುವ ನೆರೆ ಹಾವಳಿ ತಡೆಯುವ ಶಾಶ್ವತ ಪರಿಹಾರ ಒದಗಿಸುವ ಜವಾಬ್ದಾರಿ ನಮಗೆ ಬಿಡಿ" ಎಂದರು.
ಬಳಿಕ ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತದ ಭೀತಿ ಇರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ, "ಮುಳುಗಡೆಯಾಗಿ ಜನರಿಗೆ ಓಡಾಡಲು ಸಮಸ್ಯೆಯಾಗಿದೆ. ಚೆಕ್ ಡ್ಯಾಮ್ನಿಂದ ಹಿನ್ನೀರು ನಿಂತು ಕೃಷಿ ಭೂಮಿಗಳು ಮುಳುಗಡೆಯಾಗಿದೆ ಎಂದು ಸ್ಥಳೀಯರು ಸಮಸ್ಯೆ ಹೇಳಿಕೊಂಡಿದ್ದಾರೆ. ಪರಿಹಾರಕ್ಕಿಂತಲೂ ಶಾಶ್ವತ ಪರಿಹಾರಕ್ಕೆ ಒತ್ತು ಕೊಡಲು ಆಗ್ರಹಿಸಿದ್ದಾರೆ. ಕೆತ್ತಿಕಲ್‌ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್ನಿಂದ ಮಣ್ಣಿನ ಗಣಿಗಾರಿಕೆ ಮಾಡಿದ್ದಾರೆ. ಇದರಿಂದ ದೊಡ್ಡ ಲೋಪದೋಷ ಆಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಲಾಗುವುದು" ಎಂದರು.
"ಜಿಲ್ಲಾಡಳಿತ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ಆ ವಿಚಾರದಲ್ಲಿ ಯಾವುದೇ ದೂರುಗಳಿಲ್ಲ. ಮನೆ ಬೀಳುವಂತಹ ಪರಿಸ್ಥಿತಿಯಲ್ಲಿದ್ದರೆ, ಸ್ಥಳಾಂತರ ಮಾಡುವುದು, ಮನೆಗೆ ಪರಿಹಾರ ಕೊಡುವುದು, ಪುನರ್ವಸತಿ ಕಲ್ಪಿಸುವ ಕೆಲಸಗಳನ್ನು ಮಾಡಲಾಗುತ್ತಿದೆ. ಎಲ್ಲಿಯೂ ಹಣದ ಸಮಸ್ಯೆ ಇಲ್ಲ. ಪ್ರತಿ ಪಂಚಾಯತ್ಗೆ ತಕ್ಷಣಕ್ಕೆ ಹಣ ನೀಡಲಾಗಿದೆ" ಎಂದು ಹೇಳಿದರು.
"ಅಶೋಕ್ ಬಾಯಿಗೆ ಬಂದಂತೆ ಮಾತಾಡ್ತಾರೆ. ಪರಿಹಾರ ನೀಡುವ ಹಣದಲ್ಲಿ ಕೇಂದ್ರ, ರಾಜ್ಯ ಎರಡರ ಪಾಲೂ ಇದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಪ್ರಕಾರ ದುಡ್ಡು ಕೊಡುವುದು. ನಾವು ಸಂಪೂರ್ಣ ಮನೆ ಕಟ್ಟಿಸಿಕೊಡುತ್ತೇವೆ. ಭಾಗಶಃ ಮನೆಗೆ ಹಾನಿಯಾದರೆ ಎನ್ಡಿಆರ್ಎಫ್ 6,500ಕ್ಕೆ ನಾವು 43,500 ಸೇರಿಸಿ 50 ಸಾವಿರ ರೂ. ಕೊಡುತ್ತೇವೆ" ಎಂದರು.
"ಹಿಂದೆ ಬಿಜೆಪಿ ಸರ್ಕಾರ ಪರಿಹಾರ ರೂಪದಲ್ಲಿ ಕೊಟ್ಟ ರೂ. 5 ಲಕ್ಷದಲ್ಲಿ ಬೇಕಾದಷ್ಟು ಅವ್ಯವಹಾರ ಆಗಿದೆ" ಎಂದು ಆರೋಪಿಸಿದರು.
ಇದೇ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ಮುಡಾ ವಿಚಾರದಲ್ಲಿ ಬಿಜೆಪಿ ಜೆಡಿಎಸ್ನವರಿಗೆ ಪಾದಯಾತ್ರೆ ಮಾಡಲು ಯಾವ ನೈತಿಕತೆ ಇದೆ. ಇವರು ಪಾದಯಾತ್ರೆ ಮಾಡುವ ಮುಂಚಿನ ದಿನ, ಅದೇ ಜಾಗದಲ್ಲಿ ಯಡಿಯೂರಪ್ಪ ಅವರ ಪೋಕ್ಸೋ ಪ್ರಕರಣ, ವಿಜಯೇಂದ್ರ ಮೇಲಿನ ಪ್ರಕರಣವನ್ನು ಆಚೆ ತರುತ್ತೇವೆ. ಇವರ ಪಾದಯಾತ್ರೆಗೆ ಮುಂಚೆ, ಅವರು ಪಾದಯಾತ್ರೆ ಮಾಡುವ ಬಿಡದಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣದಲ್ಲಿ ಸಭೆ ನಡೆಸಿ ಅವುಗಳನ್ನೆಲ್ಲ ನಾವು ಜನರಿಗೆ ಹೇಳುತ್ತೇವೆ. ಮೈಸೂರಿನಲ್ಲಿ ದೊಡ್ಡ ಮಟ್ಟದ ಸಭೆಯನ್ನು ನಡೆಸುತ್ತೇವೆ" ಎಂದು ಹೇಳಿದರು.
"ಪಾದಯಾತ್ರೆಗೆ ಅನೇಕ ಸಂದರ್ಭದಲ್ಲಿ ಅಧಿಕೃತ ಅನುಮತಿ ಕೊಡುವುದಿಲ್ಲ. ಅವರು ಕೇಳಿದ್ದಕ್ಕೆ ಸರ್ಕಾರದಿಂದ ಅನುಮತಿ ಕೊಡಲಾಗಿದೆ. ಅವರ ವಿಚಾರ ಹೇಳಲು ಮುಕ್ತ ವಾತಾವರಣ ಇರಬೇಕು. ಬೆಂಗಳೂರು ಒಳಗಡೆ ಪಾದಯಾತ್ರೆ ಮಾಡದಂತೆ ಕೋರ್ಟ್ ಆದೇಶ ಇದೆ" ಎಂದರು.
ಕೇಂದ್ರ ಬಿಜೆಪಿಯವರು ಅಧಿಕಾರ ದುರುಪಯೋಗಪಡಿಸುತ್ತಿದ್ದಾರೆ. ರಾಜ್ಯಪಾಲರು, ಐಟಿ ಇಡಿ ಮೂಲಕ ಸರಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯೇತರ ಹಲವು ರಾಜ್ಯಗಳಲ್ಲಿ ಕೇಂದ್ರ ಸರಕಾರದ ಸಂಸ್ಥೆಗಳ ಮೂಲಕ ಸರಕಾರ ಅಸ್ಥಿರಗೊಳಿಸಲು, ಒತ್ತಡ ತರಲು, ಆರೋಪ ಮಾಡಲು ಕಷ್ಟಕ್ಕೆ ಸಿಲುಕಿಸಲು ಪ್ರಯತ್ನ ಪಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಬಂದ ಮೇಲೆ ಅಘೋಷಿತ ತುರ್ತು ಪರಿಸ್ಥಿತಿ ಇದೆ. ದೇಶದಲ್ಲಿ 95 ಶೇಕಡಾ ಇಡಿ, ಐಟಿ ರೈಡ್ ವಿರೋಧ ಪಕ್ಷಗಳ ಮೇಲೆಯೇ ಆಗಿದೆ. ಬಿಜೆಪಿಯವರಿಗೆ ಲೂಟಿ ಮಾಡಲು ರಕ್ಷಣೆ ಕೊಡುತ್ತಾರೆ. ಇದೀಗ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಒಳಗೆ ಹಾಕಬೇಕು ಎಂದು ಈ ಪ್ರಯತ್ನ ಮಾಡುತ್ತಿದ್ದಾರೆ" ಎಂದರು.
ಇದನ್ನೂ ಓದಿ: ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ: ಶರಾವತಿ ನೆರೆ ತಡೆಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಿದ್ಧತೆ - Gerusoppa Dam