ವಿಜಯಪುರ: ಸಿಎಂ ಸ್ಥಾನ ಬಿಟ್ಟುಕೊಡುವ ವಿಚಾರದ ಬಗ್ಗೆ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆಗೆ ಹಾಗೂ ಆರ್.ಅಶೋಕ್ ಅವರ ಹೇಳಿಕೆಗೆ ವಿಜಯಪುರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. 'ಇದೆಲ್ಲ ನಾವು ಹಗುರವಾಗಿ ಚರ್ಚೆ ಮಾಡಬಾರದು. ಅವರ ಅಭಿಪ್ರಾಯವನ್ನು ಅವರು ಹೇಳಿದ್ದಾರೆ' ಎಂದು ಟಾಂಗ್ ನೀಡಿದ್ದಾರೆ.
ವಿಜಯಪುರ ಜಿಲ್ಲಾ ಪ್ರವಾಸ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ, ಸಿಎಂ ಸ್ಥಾನ ಬಿಟ್ಟುಕೊಡುವ ವಿಚಾರದ ಬಗ್ಗೆ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ, ನಮ್ಮ ಸರಕಾರ, ನಾವು ನಮ್ಮ ಮುಖಂಡರು, ನಮ್ಮ ವರಿಷ್ಠರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಿದ್ದರಾಮಯ್ಯ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳು ಮತ್ತು ಒಳ್ಳೆಯ ಆಡಳಿತಗಾರರು. ಅವರ ಅಡಿ ಇಂತಹ ಚರ್ಚೆ ಮಾಡುವಂತಹದ್ದು ಅಪ್ರಸ್ತುತ, ಅನಾವಶ್ಯಕ, ಅನಗತ್ಯ ಎಂದು ಅಷ್ಟೇ ಹೇಳಬಲ್ಲೇ ನಾನು" ಎಂದರು.
ಇದೇ ವಿಚಾರವಾಗಿ ಮುಂದುವರೆದು ಮಾತನಾಡಿದ ಅವರು, "ಬೇರೆಯವರದ್ದು ಅವರ ವೈಯುಕ್ತಿಕ ಅಭಿಪ್ರಾಯ ಇರಬಹುದು. ಸ್ವಾಮೀಜಿಗಳದ್ದು ಇರಬಹುದು, ಅವರ ಜನಾಂಗದವರದು ಇರಬಹುದು. ಮತ್ತು ಇನ್ನೊಬ್ಬರದ್ದು ಇರಬಹುದು. ಅದು ಅವರವರ ಅಭಿಪ್ರಾಯ. ಸಿದ್ದರಾಮಯ್ಯ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿ ಅಲ್ವಾ? ಅವರು ಇರಬೇಕಾ ಇಲ್ಲವಾ ಅನ್ನೋದನ್ನು ಚರ್ಚೆ ಮಾಡುವಂಥದ್ದು ಖಂಡಿತವಾಗಿಯೂ ನಾವು ಒಪ್ಪುವಂಥದ್ದಲ್ಲ. ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಇಲ್ಲ. ಈ ಬಗ್ಗೆ ಯಾವ ಚರ್ಚೆನೂ ಇಲ್ಲ" ಎಂದು ಸ್ಪಷ್ಟನೆ ನೀಡಿದರು.
ಬಳಿಕ ಎರಡೂವರೆ ವರ್ಷಕ್ಕೆ ಒಪ್ಪಂದ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, "ಇದೆಲ್ಲ ಯಾರು ಹೇಳಿದ್ದು, ಆ ರೀತಿ ಯಾವುದು ಇಲ್ಲ. ಸಾರ್ವಜನಿಕವಾಗಿ ಚರ್ಚೆ ಮಾಡಿದರೆ ನಾವೇನೂ ಮಾಡೋಕಾಗಲ್ಲ. ಇದು ಸಾರ್ವಜನಿಕವಾಗಿ ಚರ್ಚೆ ಆಗೋ ವಿಚಾರವೂ ಅಲ್ಲ. ಒಬ್ಬರು ಸಿಎಂ ಇದ್ದಾಗ ಬದಲಾವಣೆ ಬಗ್ಗೆ ಪ್ರಶ್ನೆಯೇ ಇಲ್ಲ. ಬದಲಾವಣೆ ಯಾಕೆ ಮಾಡಬೇಕು ಎಂದು ಸಚಿವರು ಪ್ರಶ್ನಿಸಿದರು. ಹೆಚ್ಚುವರಿ ಡಿಸಿಎಂ ಬೇಡಿಕೆ ವಿಚಾರಕ್ಕೆ, ಕಾಂಗ್ರೆಸ್ನಲ್ಲಿ ಯಾವುದೇ ಬಣದ ರಾಜಕೀಯ ಇಲ್ಲ. ರಾಜಣ್ಣ ಸಿದ್ದರಾಮಯ್ಯ ಅಭಿಮಾನಿ, ಅದಕ್ಕೆ ಹೇಳಿದ್ದಾರೆ. ನಾವೇನು ಮಾಡೋಕಾಗುವುದಿಲ್ಲ ಎಂದರು".