ಮಂಡ್ಯ: ''ಮಂಡ್ಯ ಜಿಲ್ಲೆಯಲ್ಲಿ ಒಂದಷ್ಟು ನಾಯಕರು ಕಾಂಗ್ರೆಸ್ ಸೇರುತ್ತಾರೆ ಅಂತಾ ನಾನು ಮೊದಲೇ ಹೇಳಿದ್ದೆ. ಮುಂದಿನ 10 ದಿನಗಳ ಒಳಗೆ ಇದರ ಚಿತ್ರಣ ಗೊತ್ತಾಗುತ್ತದೆ. ಕಾಂಗ್ರೆಸ್‌ಗೆ ಬರುವವರು ಕಂಡಿಷನ್ ಹಾಕಿಲ್ಲ, ನಾವೂ ಹಾಕಿಲ್ಲ. ನಾರಾಯಣಗೌಡ ಪಕ್ಷಕ್ಕೆ ಬರ್ತಾರೆ ಅಂತಾನೂ ಹೇಳಲ್ಲ, ಬೇರೆಯವರು ಬರುವುದಿಲ್ಲ ಎಂದೂ ಹೇಳುವುದಿಲ್ಲ'' ಎಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಸಿಎಂ ಸಿದ್ದರಾಮಯ್ಯರ ಭೇಟಿ ಮಾಡಿರುವ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಸಚಿವ ಎನ್.ಚಲುವರಾಯಸ್ವಾಮಿ ಮಂಡ್ಯದಲ್ಲಿ ಗುರುವಾರ ಉತ್ತರಿಸಿದ್ದಾರೆ. ''ಜೆಡಿಎಸ್‌ನಿಂದಲೂ ಕಾಂಗ್ರೆಸ್‌ಗೆ ಕೆಲವರು ಬರುತ್ತಾರೆ. ಜೆಡಿಎಸ್ನಲ್ಲಿ ವಾತಾವರಣ ಸರಿ ಇಲ್ಲ ಎಂದು ನಾರಾಯಣಗೌಡ ಬಿಜೆಪಿಗೆ ಹೋದರು. ಈಗ ಬಿಜೆಪಿ-ಜೆಡಿಎಸ್ ಒಂದಾದ ಮೇಲೆ ನಾರಾಯಣಗೌಡ ಅಲ್ಲಿ ಹೇಗೆ ಇರುತ್ತಾರೆ'' ಎಂದು ಪ್ರಶ್ನಿಸಿದರು.
''ಮಂಡ್ಯದಲ್ಲಿ ಬಿಜೆಪಿಗಿಂತ ಜೆಡಿಎಸ್‌ಗೆ ಪ್ರಾಮುಖ್ಯತೆ. ಅದಕ್ಕೆ ಬಿಜೆಪಿಯವರಿಗೆ ಅಸಮಾಧಾನ ಆಗುತ್ತಿದೆ. ನಾವು ಅಪರೇಷನ್ ಹಸ್ತ ಮಾಡಿಲ್ಲ. ಎಲ್ಲರೂ ಅವರ ಪಕ್ಷದಲ್ಲಿ ಅಸಮಾಧಾನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರುತ್ತಿದ್ದಾರೆ. ನಾರಾಯಣಗೌಡ ಅವರಿಗೆ ಕಾಂಗ್ರೆಸ್‌ಗೆ ಬರಲು ಆಸಕ್ತಿ ಇದೆ'' ಎಂದು ಚಲುವರಾಯಸ್ವಾಮಿ ಹೇಳಿದರು. ಇತ್ತೀಚೆಗೆ ಮಾಜಿ ಸಚಿವ ನಾರಾಯಣಗೌಡ ಹಾಗೂ ಸಿಎಂ ಸಿದ್ದರಾಮಯ್ಯ ಒಟ್ಟಿಗೆ ಇರುವ ಫೋಟೋ ಒಂದು ವೈರಲ್ ಆಗಿತ್ತು.
ಹೆಚ್ಡಿಕೆಗೆ ಟಾಂಗ್: ಇದೇ ವೇಳೆ ಕಾಂಗ್ರೆಸ್ ಎರಡು ತಲೆ ರಾಜಕೀಯ ಮಾಡುತ್ತಿದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ''ಪಾಪ ಕುಮಾರಸ್ವಾಮಿಗೆ ಮಾತ್ರ ಒಂದೇ ತಲೆ ಕಣ್ರಿ. ಈ ರಾಷ್ಟ್ರದಲ್ಲಿ ಮಹಾತ್ಮಗಾಂಧಿ ಬಿಟ್ಟರೆ ಸತ್ಯ ಹೇಳೋದು ಕುಮಾರಸ್ವಾಮಿ ಒಬ್ಬರೇ. ಅರು ತಲೆ ಮತ್ತು ಹೃದಯಕ್ಕೆ ಕನೆಕ್ಷನ್ ಇಲ್ಲದ ಹಾಗೆ ಮಾತಾಡುತ್ತಾರೆ. ಈ ಹಿಂದೆ ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ಮಾತನಾಡಿದ್ದನ್ನು ನಾವು ನೋಡಿದ್ದೇವೆ. ಅವರು ಹುಟ್ಟುತ್ತಲೇ ಎಲ್ಲ ಪರಿಣಿತಿ ಹೊಂದಿದ್ದಾರೆ'' ಎಂದು ಟೀಕಿಸಿದರು.
ಕೇಂದ್ರದಿಂದ ತೆರಿಗೆ ತಾರತಮ್ಯ ವಿಚಾರವಾಗಿ ಮಾತನಾಡಿದ ಅವರು, ''ಕರ್ನಾಟಕದ ಜನತೆಯ ಹಿತದೃಷ್ಟಿಯಿಂದ ದೆಹಲಿಯಲ್ಲಿ ಹೋರಾಟ ಮಾಡಲಾಗಿದೆ. ರಾಜ್ಯಕ್ಕೆ ಇಷ್ಟೊಂದು ಅನ್ಯಾಯ ಆಗುತ್ತಿದೆ ಅಂತ ಗೊತ್ತಿರಲಿಲ್ಲ. 15ನೇ ಹಣಕಾಸು ಆಯೋಗದ ಅಡಿ ಸಿಗಬೇಕಾದ ನ್ಯಾಯ ರಾಜ್ಯಕ್ಕೆ ಸಿಕ್ಕಿಲ್ಲ. ಬರಗಾಲಕ್ಕೆ ಒಂದು ರೂಪಾಯಿ ಕೂಡ ಪರಿಹಾರ ಬಿಡುಗಡೆ ಮಾಡಿಲ್ಲ. ಪ್ರತಿಭಟನೆಗೆ ಸಂಸದೆ ಸುಮಲತಾ ಅವರು ಬಂದಿಲ್ಲ. ಡಿ.ಕೆ.ಸುರೇಶ್ ಬಿಟ್ರೆ ಯಾರೂ ಇರಲಿಲ್ಲ. ರಾಜ್ಯದ ಎಲ್ಲ ಸಂಸದರಿಗೂ ಸಿಎಂ ಪತ್ರ ಬರೆದಿದ್ದರು. ಆದರೆ, ಯಾರೂ ಪಾಲ್ಗೊಂಡಿಲ್ಲ'' ಎಂದರು.
ಇದನ್ನೂ ಓದಿ: ಮಾಧುಸ್ವಾಮಿ ಟಿಕೆಟ್ ಅಪೇಕ್ಷೆಗೆ ವಿರೋಧವಿಲ್ಲ, ನಾನು ರಾಜ್ಯಸಭಾ ಸ್ಥಾನ ಕೇಳಿದ್ದೇನೆ: ವಿ.ಸೋಮಣ್ಣ