ಮಂಡ್ಯ: ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ನಮ್ಮ ಬಳಿ ಕೈ ಕಟ್ಟಿ ನಿಂತಿದ್ದರು ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಸಚಿವ ಸ್ಥಾನಕ್ಕಾಗಿ ಚಲುವರಾಯಸ್ವಾಮಿ ನನಗೆ ದುಂಬಾಲು ಬಿದ್ದಿದ್ದರು ಎಂದು ಹೆಚ್‌ಡಿಕೆ ಹೇಳಿದ್ದಾರೆ. ಆದರೆ, ಅವರು ಸಿಎಂ ಆಗುವುದು ಬೇಡ ಎಂದರೆ ಅವರಪ್ಪ ಮತ್ತು ಭಾವ ಹೇಳಿದ್ದರು. ಆ ಸಮಯದಲ್ಲಿ ಹೆಚ್‌ಡಿಕೆ ನನ್ನನ್ನೂ ಸೇರಿದಂತೆ 39 ಜನ ಶಾಸರ ಬಳಿ ಅವರು ಹೇಗೆ ನಿಂತಿದ್ದರು ಎಂದು ಕೇಳಿ ಎಂದು ತಿರುಗೇಟು ನೀಡಿದರು.
1999 ನಾನು ಗೆದ್ದಿದ್ದೆ. ಸಮರ್ಥ ಎಂಬ ಕಾರಣಕ್ಕೆ ಮಂತ್ರಿ ಸ್ಥಾನ ನೀಡಿದ್ದರು. ಈಗಲೂ ಮಂತ್ರಿಯಾಗಿದ್ದೇನೆ, ಸೋಲು ಕಂಡಿದ್ದರೆ ಮಂತ್ರಿಯಾಗುತ್ತಿದ್ದೆನಾ?. ಜೆಡಿಎಸ್‌ನವರು ಹಳೇ ಭಾಷಣ ಹೊಡೆಯುತ್ತಿದ್ದಾರೆ. ಭಾಷಣದಲ್ಲಿ ಅವರು ಮುಂದೆ ಇದ್ದಾರೆ, ನಾವು ಅಭಿವೃದ್ಧಿಯಲ್ಲಿ ಮುಂದೆ ಇದ್ದೇವೆ. ನಾವು ಬರೀ ಬಾಯಲ್ಲಿ ಹೇಳಲ್ಲ, ಕೆಲಸ ಮಾಡಿ ತೋರಿಸುತ್ತೇವೆ. ಕೆಲವರಿಗೆ ಮಂಡ್ಯ ಅಭಿವೃದ್ಧಿ ಬೇಕಿಲ್ಲ. ಅಭಿವೃದ್ಧಿ ಆದರೆ ಜಿಲ್ಲೆ ಇವರ ಹಿಡಿತಕ್ಕೆ ಸಿಗಲ್ಲ ಎಂದರು.
ಬೇರೆ ಪಕ್ಷದವರು ಸೋತರೆ ನನಗೇನಾಗಬೇಕು. ನನಗೆ ನಮ್ಮ ಪಕ್ಷ ಹಾಗೂ ಜಿಲ್ಲೆಯ ಜನತೆ ಮುಖ್ಯ. ರಾಜಕೀಯವಾಗಿ ಯಾರು ಯಾರನ್ನು ತುಳಿದಿದ್ದಾರೆ, ಮುಗಿಸಿದ್ದಾರೆ ಎಂಬ ಬಗ್ಗೆ ದೊಡ್ಡ ಇತಿಹಾಸ ಇದೆ. ಅಭ್ಯರ್ಥಿ ಆಯ್ಕೆ ವಿಚಾರವಾಗಿ ನಾವು ಯಾವುದೇ ಲೆಕ್ಕಾಚಾರ ಹಾಕಿಲ್ಲ. ರಾಷ್ಟ್ರೀಯ ಪಕ್ಷ ಒಂದು ತಿಂಗಳ ಮೊದಲೇ ಅಭ್ಯರ್ಥಿ ಆಯ್ಕೆ ಮಾಡಿದೆ. ಅವರು ಇನ್ನು ಲೆಕ್ಕಾಚಾರದಲ್ಲಿದ್ದಾರೆ. ಯಾರೇ ಅಭ್ಯರ್ಥಿಯಾದರೂ ನಮಗೇನು, ಯಾರಾದರೂ ನಿಂತುಕೊಳ್ಳಲಿ. ಕಾಂಗ್ರೆಸ್ ಅಭ್ಯರ್ಥಿ ಈಗಾಗಲೇ ಕ್ಷೇತ್ರದ ಎಲ್ಲ ಕಡೆ ಸಂಚಾರ ಮಾಡಿದ್ದಾರೆ ಎಂದು ಹೇಳಿದರು.
ಇವನ್ಯಾವನೋ ಒಬ್ಬ ತಗಡುನ ಮಂತ್ರಿ ಮಾಡಿಬಿಟ್ಟು ಬೇಡಾ ಕಣಯ್ಯ ಕಾಟಾ - ಸುರೇಶ್ ಗೌಡ: ಮತ್ತೊಂದೆಡೆ, ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಯಾರ‍್ಯಾರು ಹೊಟ್ಟೆಪಾಡಿಗೆ ಎಲ್ಲೆಲ್ಲಿಗೆ ಬಂದರು, ಏನೇನು ಮಾಡಿದರು ಎಂಬುದು ತೆರೆದಿಟ್ಟ ಪುಸ್ತಕ. ಮಂಡ್ಯದಲ್ಲಿ ಇವನ್ಯಾವನೋ ಒಬ್ಬ ತಗಡುನ ಮಂತ್ರಿ ಮಾಡಿಬಿಟ್ಟು ಬೇಡಾ ಕಣಯ್ಯ ಕಾಟ. ದುರಾಹಂಕಾರ ಆತನ ಕೈಯಲ್ಲಿ ಮಾತನಾಡಿಸ್ತಿದೆ. ದುಡ್ಡು ಇರುವವರೆಲ್ಲ ಆತನ ಹತ್ತಿರ ಹೋಗ್ತಾರೆ, ಅದೇ ಅವನ ಅದೃಷ್ಟ. ಮಂಡ್ಯ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಕಡಿಮೆ ಕುಳ ಅಲ್ಲ. ಕೆರೆ ನೀರೆಲ್ಲ ನದಿಗೆ ಹೋಗುತ್ತೆ, ನದಿ ನೀರೆಲ್ಲ ಸಮುದ್ರಕ್ಕೆ ಹೋಗುತ್ತೆ ಅಲ್ವಾ. ದುಡ್ಡಿರುವವರೆಲ್ಲ ಅವರ ಬಳಿ ಹೋಗ್ತಾರೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಭೇಟಿ ಮಾಡಿ ಮಾತುಕತೆ ನಡೆಸಿದ ಕುಮಾರಸ್ವಾಮಿ: ಚುನಾವಣೆ ಧರ್ಮಯುದ್ಧ ಇದ್ದಂತೆ ಎಂದ ಡಾ.ಮಂಜುನಾಥ್