ಬೆಂಗಳೂರು: ಕಳೆದ ಸಾಲಿನಲ್ಲಿ ಬರದಿಂದಾಗಿ ಉಂಟಾದ ಬೆಳೆ ಹಾನಿಗೆ ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ 1,791 ಕೋಟಿ ರೂ. ಬೆಳೆ ವಿಮೆ ಲೆಕ್ಕಾಚಾರ ಮಾಡಿದ್ದು, ಬಹುತೇಕ ಇತ್ಯರ್ಥಪಡಿಸಲಾಗಿದೆ. ಅದೇ ರೀತಿ ಹಿಂಗಾರು ಬೆಳೆ ವಿಮೆ ಪರಿಹಾರ ಹಣ ತಲುಪಿಸಲು ವಿಮಾ ಕಂಪನಿಗಳೊಂದಿಗೆ ಸಮನ್ವಯ ಮಾಡಿ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಜಲಾನಯನ ಇಲಾಖೆಗಳು, ಕರ್ನಾಟಕ ರಾಜ್ಯ ಬೀಜ ನಿಗಮ, ಕೃಷಿಕ ಸಮಾಜದ ಅಧಿಕಾರಿಗಳ ಸಭೆ ನಡೆಸಿದ ಅವರು, ಕಳೆದ ಸಾಲಿನ ವಿಮೆ ಇತ್ಯರ್ಥದ ಜೊತೆಗೆ ಈ ಮುಂಗಾರಿಗೂ ಬೆಳೆ ವಿಮೆ ನೋಂದಣಿ ಹಾಗೂ ರೈತ ಜಾಗೃತಿಗೆ ಆದ್ಯತೆ ನೀಡಿ ಎಂದು ನಿರ್ದೇಶನ ನೀಡಿದರು.
2023-24ರ ಮುಂಗಾರಿನಲ್ಲಿ 19.14 ಲಕ್ಷ ರೈತರು 15.10 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ವಿಮೆ ನೋಂದಾಯಿಸಿದ್ದರು. ನಿಯಮಾನುಸಾರ ಪರಿಶೀಲಿಸಿ ಅಂತಿಮವಾಗಿ ಬಾಕಿ ಇರುವ 130 ಕೋಟಿ ರೂ.ಗಳನ್ನು ಶೀಘ್ರ ವಿತರಣೆ ಮಾಡಿ ಎಂದು ಚಲುವರಾಯಸ್ವಾಮಿ ಸೂಚಿಸಿದರು.
2023-24ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ 5.88 ಲಕ್ಷ ರೈತರು 5.43 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಾಯಿಸಿದ್ದರು. ಈವರೆಗೆ ಪ್ರಿವೆಂಟೆಡ್ ಸೋಯಿಂಗ್, ಸ್ಥಳೀಯ ಪ್ರಕೃತಿ ವಿಕೋಪ ಮತ್ತು ಮಿಡ್ ಸೀಜನ್ ಅಡ್ವರ್ಸಿಟಿ ಅಡಿ 16,053 ರೈತರಿಗೆ 7.93 ಕೋಟಿ ರೂ. ಪರಿಹಾರ ಇತ್ಯರ್ಥ ಪಡಿಸಲಾಗಿದೆ. ಉಳಿದ ರೈತರಿಗೆ ವಿಮೆ ಹಣ ತಲುಪಿಸಿ ಎಂದು ನಿರ್ದೇಶಿಸಿದರು.
ರಾಜ್ಯಾದ್ಯಂತ ಪೂರ್ವ ಮುಂಗಾರು ಉತ್ತಮವಾಗಿದ್ದು, ಮುಂಗಾರು ಕೂಡ ಆರಂಭವಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಬೇಡಿಕೆ ಆಧಾರದಲ್ಲಿ ಪೂರೈಕೆಯಾಗಿದ್ದು, ಎಲ್ಲೂ ಕೊರತೆಯಾಗದಂತೆ ಎಚ್ಚರ ವಹಿಸಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಎಂದರು.
ಕೃಷಿ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರಗತಿಯಲ್ಲಿರುವ ಹಾಗೂ ಪ್ರಾರಂಭವಾಗ ಬೇಕಿರುವ ವಿವಿಧ ಕಟ್ಟಡ ಕಾಮಗಾರಿಗಳನ್ನು ಅತ್ಯಂತ ತ್ವರಿತವಾಗಿ ಮುಕ್ತಾಯಗೊಳಿಸುವಂತೆ ಕೃಷಿ ಸಚಿವರು ಸೂಚನೆ ನೀಡಿದರು.
ಕೃಷಿ ಇಲಾಖೆ ಆಯುಕ್ತರಾದ ಎ.ವೈ.ಪಾಟೀಲ್ ಅವರು ಮಾತನಾಡಿ, ಆರ್ಥಿಕ ಸಾಂಖ್ಯಿಕ ನಿರ್ದೇಶನಾಲಯ ಬೆಳೆ ಕಟಾವು ಪ್ರಯೋಗಗಳ ಇಳುವರಿ ನೀಡಿರುವ ಹಿಂಗಾರು ಹಂಗಾಮಿನ 4,368 ವಿಮಾ ಘಟಕಗಳಿಗೆ 1,03,044 ರೈತರ 152.71 ಕೋಟಿ ರೂ. ಬೆಳೆ ವಿಮೆ ಪರಿಹಾರ ಮೊತ್ತ ಲೆಕ್ಕಾಚಾರ ಮಾಡಲಾಗಿದೆ. ವಿಮಾ ಸಂಸ್ಥೆಗಳಿಂದ ಇತ್ಯರ್ಥಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ರೈತ ಸಂಪರ್ಕ ಕೇಂದ್ರ, ಗೋದಾಮು, ಮಿಲೆಟ್ ಸರಪಳಿ ಪಾರ್ಕ್ ಮತ್ತಿತರ ಕಟ್ಟಡಗಳನ್ನು ಆದಷ್ಟು ಬೇಗ ಮುಕ್ತಾಯ ಗೊಳಿಸಬೇಕು ಎಂದು ಅನುಷ್ಠಾನ ಏಜೆನ್ಸಿಗಳಿಗೆ ಸೂಚಿಸಿದರು. ಇನ್ನೂ ಪ್ರಾರಂಭವಾಗದೇ ಇರುವ ಕಾಮಗಾರಿಗಳಿಗೆ ಬೇಗ ಚಾಲನೆ ನೀಡಬೇಕು. ಜಾಗದ ಸಮಸ್ಯೆ ಇರುವ ಕಡೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಸ್ಥಳ ಪಡೆದು ಕೆಲಸ ಪ್ರಾರಂಭಿಸಿ ಎಂದು ತಿಳಿಸಿದರು.
ಇದನ್ನೂ ಓದಿ: ಉಸ್ತುವಾರಿಗಳೇ ಬೆಳಗಾವಿ ಸೋಲಿನ ಹೊಣೆ ಹೊರಬೇಕು: ಸತೀಶ್ ಜಾರಕಿಹೊಳಿ - Satish Jarakiholi
ಇಸ್ರೇಲ್ ಪ್ರತಿನಿಧಿಗಳೊಂದಿಗೆ ಕೃಷಿ ಸಚಿವರ ಚರ್ಚೆ: ಕೃಷಿಯಲ್ಲಿ ಹೊಸ ಸಂಭಾವ್ಯ ಸುಧಾರಣೆಗಳ ಬಗ್ಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಇಸ್ರೇಲ್ ದೇಶದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದರು. ಹವಾಮಾನ ಬದಲಾವಣೆ, ನೀರಿನ ಮಿತ ಬಳಕೆ, ವೈಜ್ಞಾನಿಕ ಕೃಷಿ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಿದ ಸಚಿವರು, ರಾಜ್ಯದ ಕೃಷಿ ಪದ್ದತಿಯಲ್ಲಿ ಪರಿಣಾಕಾರಿ ಹಾಗೂ ಗುಣಾತ್ಮಕ ಬದಲಾವಣೆಗೆ ಸಲಹೆ, ಸಹಕಾರ ನೀಡುವಂತೆ ಕೋರಿದರು. ಇಸ್ರೇಲ್ನ ಕೃಷಿ ಸಂಸ್ಕೃತಿ, ತಳಿ ಸಂರಕ್ಷಣೆ ಹಾಗೂ ಅಭಿವೃದ್ಧಿ, ಕೃಷಿ ಇಲಾಖೆ, ವಿಶ್ವವಿದ್ಯಾಲಯಗಳ ಪಾತ್ರದ ಬಗ್ಗೆ ಮಾಹಿತಿ ಪಡೆದ ಸಚಿವರು, ರಾಜ್ಯದಲ್ಲಿನ ಪರಿಸ್ಥಿತಿ, ನಡೆಸಲಾಗುತ್ತಿರುವ ನಿರಂತರ ಸಂಶೋಧನೆಗಳು ಕೃಷಿ ಭೂಮಿಗೆ ಅದರ ವರ್ಗಾವಣೆ, ಸರ್ಕಾರದ ಯೋಜನೆ, ಪ್ರೋತ್ಸಾಹ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಿದರು.
ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಸ್ರೇಲ್ ದೇಶದ ಡೆಪ್ಯೂಟಿ ಕಾನ್ಸಲೇಟ್ ಜನರಲ್ ಲೈಮೋರ್ ಬ್ಲೆಟರ್, ಇಸ್ರೇಲ್ನಲ್ಲಿರುವ SOLED & DATA PANEL ಕಂಪನಿಯ ಕೋ ಫೌಂಡರ್ ಡಾನ್ ಪೌಷ್ಟಿ ಹಾಗೂ CSO, CLIMATE CROP ಕಂಪನಿಯ ಕೋ ಫೌಂಡರ್ ವಿವೇಕಾನಂದ ತಿವಾರಿ, ಇಸ್ರೇಲ್ ದೇಶದ ಕಾನ್ಸಲೇಟ್ ಸಿಬ್ಬಂದಿ ರೇಷ್ಮ, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ.ಜಿ.ಟಿ.ಪುತ್ರ, ಅಪರ ನಿರ್ದೇಶಕ ರೆಡ್ಡಿ, ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.