ಬೆಂಗಳೂರು: ರೈತರ ಹಿತಕಾಯಲು ಸರ್ಕಾರ ರೂಪಿಸಿರುವ ಬೆಳೆ ವಿಮೆ ಯೋಜನೆಯ ಸಂಪೂರ್ಣ ಫಲ ಕೃಷಿಕರಿಗೆ ಹೋಗುತ್ತಿದ್ದು, ಇದನ್ನು ಇನ್ನಷ್ಟು ಪಾರದರ್ಶಕಗೊಳಿಸಿ ಎಲ್ಲರ ಅನುಮಾನಗಳನ್ನು ಸಂಪೂರ್ಣವಾಗಿ ಬಗೆಹರಿಸಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನಿರ್ದೇಶನ ನೀಡಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಕರ್ನಾಟಕ ರಾಜ್ಯ ಬೀಜ ನಿಗಮದ 313ನೇ ನಿರ್ದೇಶಕ ಮಂಡಳಿ ಸಭೆ ನಡೆಸಿದ ಸಚಿವರು, ಇಲಾಖೆಯ ಯಾವುದೇ ಅಧಿಕಾರಿಗಳು ಏಜೆನ್ಸಿಗಳ ಪರ ಇಲ್ಲವೇ ಇಲ್ಲ. ನಾವೆಲ್ಲರೂ ರೈತರಿಗಾಗಿ ಕೆಲಸ ಮಾಡುತ್ತಿದ್ದೇವೆ. ಆದರೂ ಕೆಲವು ರೈತರು, ಜನಪ್ರತಿನಿಧಿಗಳಲ್ಲಿರುವ ಅನುಮಾನಗಳನ್ನ ವ್ಯವಸ್ಥಿತವಾಗಿ ಮನವರಿಕೆ ಮಾಡಿಕೊಟ್ಟು ಬಗೆಹರಿಸಬೇಕು. ಇದಕ್ಕಾಗಿ ಒಂದು ಸಭೆ ಆಯೋಜಿಸುವಂತೆ ಚಲುವರಾಯಸ್ವಾಮಿ ಸೂಚಿಸಿದರು.
ತಳ ಹಂತದಿಂದ ಮೇಲುಮಟ್ಟದವರೆಗೆ ಯಾವುದೇ ಅಧಿಕಾರಿ, ಸಿಬ್ಬಂದಿ ಬೆಳೆ ವಿಮೆ ಕಂಪನಿಗಳಿಂದ ಒಂದು ಸಣ್ಣ ಅನುಕೂಲವನ್ನೂ ಪಡೆಯುತ್ತಿಲ್ಲ. ಆದರೂ, ಮುಂದೆಯೂ ಸಹ ಯಾವುದೇ ಸಂದರ್ಭದಲ್ಲಿಯೂ ನಡೆಯಬಾರದು ಎಂದು ಕೃಷಿ ಸಚಿವರು ತಾಕೀತು ಮಾಡಿದರು.
ಇದೇ ವೇಳೆ, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಭುಕುಮಾರ್ ಮತ್ತು ಆಯುಕ್ತ ವೈ.ಎಸ್. ಪಾಟೀಲ್ ಅವರು, ಬೆಳೆ ಸಮೀಕ್ಷೆ ಕೇವಲ ಕೃಷಿ ಇಲಾಖೆಗಳಿಂದ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುವ ವಿವಿಧ ಇಲಾಖೆ ಅಧಿಕಾರಿಗಳ ಸಮಿತಿಯಿಂದ ನಡೆಯುತ್ತಿದ್ದು, ಯಾವುದೇ ಲೋಪಗಳಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ರಾಜ್ಯ ಬೀಜ ನಿಗಮ ಇನ್ನಷ್ಟು ಕೃಷಿಗೆ ಪೂರಕ ಯೋಜನೆಗಳೊಂದಿಗೆ ಕೆಲಸ ಮಾಡಬೇಕು. ಮದ್ಯವರ್ತಿಗಳಿಗೆ ಅವಕಾಶ ನೀಡದೇ ಲಾಭದ ರೈತರ ಪಾಲು ಸಂಪೂರ್ಣ ನೇರ ವರ್ಗಾವಣೆಯಾಗಬೇಕು ಎಂದು ಸಚಿವರು ಹೇಳಿದರು.ನಿಗಮದ ಸೇವೆಯಲ್ಲಿ ಗುಣಾತ್ಮಕ ಬದಲವಣೆಯಾಗಬೇಕು ಲಾಭ ಗಳಿಕೆಯೊಂದೇ ಮಾನದಂಡವಾಗದೇ ಸೇವಾರ್ಪತೆ, ಧಕ್ಷತೆಯೂ ಬೇಕು ಎಂದು ಸಲಹೆ ನೀಡಿದರು.
ಅಕ್ಟೋಬರ್ ನಲ್ಲಿ ಚುನಾವಣೆ : ಇದೇ ವೇಳೆ ನಿಗಮಕ್ಕೆ ಬೆಳೆಗಾರ ಪ್ರತಿನಿಧಿಗಳ ಆಯ್ಕೆ ನಡೆಯುವ ಚುನಾವಣೆಯಲ್ಲಿ ಅಕ್ಟೋಬರ್ 15ರ ನಂತರ ನಡೆಸಲು ಕ್ರಮ ವಹಿಸುವಂತೆ ಸಚಿವರು ಹೇಳಿದರು. ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ದೇವರಾಜ್, ತೋಟಗಾರಿಕೆ ನಿರ್ದೇಶಕ ರಮೇಶ್, ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿ ಹೊನ್ನಲಿಂಗಪ್ಪ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಹಾವು ಕಡಿತದ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಕ್ರಿಯಾ ಯೋಜನೆ: ಆರೋಗ್ಯ ಸಚಿವ ಗುಂಡೂರಾವ್ - State Action Plan