ಬೆಂಗಳೂರು: ಪ್ರತಿ ರಾಜ್ಯದಲ್ಲಿಯೂ ಕನಿಷ್ಠ ವೇತನ ನೀತಿ ಇದೆ. ಇದು ಸೂಕ್ಷ್ಮ, ಸಣ್ಣ, ಮಧ್ಯಮ ಮತ್ತು ಬೃಹತ್ ಹಾಗೂ ಐಟಿ ಕಂಪನಿಗಳಿಗೆ ಸಾಮಾನ್ಯವಾಗಿದೆ ಎಂದು ಕಾಸಿಯಾ ಅಧ್ಯಕ್ಷ ಎಂ. ಜಿ. ರಾಜಗೋಪಾಲ್ ತಿಳಿಸಿದರು.
ಬೃಹತ್ ಕೈಗಾರಿಕೆಗಳು ಮತ್ತು ಐಟಿ ಕಂಪನಿಗಳು ನಿರ್ದಿಷ್ಟ ಅರ್ಹತೆ ಮತ್ತು ಕೌಶಲ್ಯಗಳೊಂದಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ. ಆದರೆ ಎಂಎಸ್ಎಂಇಗಳು ಶಾಲೆ ಬಿಟ್ಟ, ಅನಕ್ಷರಸ್ಥ ಮತ್ತು ಯಾವುದೇ ಕೌಶಲ್ಯಗಳಿಲ್ಲದ ಉದ್ಯೋಗಿಗಳಿಗೆ ಕೆಲಸ ನೀಡಿ ಅವರಿಗೆ ಸೂಕ್ತ ತರಬೇತಿ ನೀಡುತ್ತಿವೆ. ಆದ್ದರಿಂದ 50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಬೇಕು. ದೇಶದ ಎಂಎಸ್ಎಂಇಗಳಿಗೆ ಸಾಮಾನ್ಯ ಕನಿಷ್ಠ ವೇತನ ನೀತಿಯನ್ನು ಜಾರಿಗೊಳಿಸಬೇಕು ಎಂದು ವಿನಂತಿಸಿದರು.
ಭಾನುವಾರ ಕೇಂದ್ರ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ಮಾಡಿದ ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ನೇತೃತ್ವದ ನಿಯೋಗ, ಬ್ಯಾಂಕಿಂಗ್ ಮತ್ತು ಹಣಕಾಸು ಹಾಗೂ ಕಾರ್ಮಿಕ ವಿಷಯಗಳು ಸೇರಿದಂತೆ ಎಂಎಸ್ಎಂಇಗಳು ಎದುರಿಸುತ್ತಿರುವ ಹಲವು ಇತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿತು.
ಎಂಎಸ್ಎಂಇಗಳನ್ನು ಆದ್ಯತೆಯ ಸಾಲಕ್ಕಾಗಿ ಪರಿಗಣಿಸಲಾಗಿದ್ದರೂ ಸಹ ಬ್ಯಾಂಕ್‌ಗಳು ವಿಧಿಸುತ್ತಿರುವ ಬಡ್ಡಿ ದರವು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗೆ ನೀಡುವ ಸಾಲದ ಬಡ್ಡಿ ದರಕ್ಕಿಂತ ಅಧಿಕವಾಗಿದ್ದು, ಪಡೆಯುವ ಸಾಲದ ಬಡ್ಡಿಯ ದರವನ್ನು ಕಡಿಮೆ ಮಾಡಬೇಕು. ಪ್ರಸ್ತುತ ಎನ್ಪಿಎ ಮಾಡದಂಡವು 90 ದಿನಗಳಾಗಿದ್ದು, ಇದನ್ನು 180 ದಿನಗಳಿಗೆ ಏರಿಸಿ ಎಂಎಸ್ಎಂಇಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕೇಳಿಕೊಂಡರು.
ಪ್ರಸ್ತುತ ಸಿಜಿಟಿಎಂಎಸ್ಇ ಕವರೇಜ್ ಅಡಿಯಲ್ಲಿ ಸಾಲಗಾರರ ವರ್ಗವನ್ನು ಅನುಸರಿಸಿ ಶೇ.75 ರಿಂದ 85 ರಷ್ಟು ಸಾಲಗಳನ್ನು ಮಂಜೂರು ಮಾಡಲಾಗುತ್ತಿದೆ. ಆದರೆ 15 ರಿಂದ 25 ರಷ್ಟು ನಷ್ಟದ ಭಯದಿಂದಾಗಿ ಬ್ಯಾಂಕ್‌ಗಳು ಸಾಲವನ್ನು ನೀಡಲು ಹಿಂಜರಿಯುತ್ತಿವೆ. ಈ ಕವರೇಜ್ ಮಿತಿಯನ್ನು ಶೇ.90ರ ವರೆಗೆ ಹೆಚ್ಚಿಸಿದರೆ ಬ್ಯಾಂಕ್‌ಗಳು ಯಾವುದೇ ಹಿಂಜರಿಕೆಯಿಲ್ಲದೆ ಸಿಜಿಟಿಎಂಎಸ್ಇ ಕವರೇಜ್ ಅಡಿಯಲ್ಲಿ ಸಾಲವನ್ನು ನೀಡುವಂತಾಗುತ್ತದೆ ಎಂದು ಹೇಳಿದರು.
ಎಂಎಸ್ಎಂಇ ಸಚಿವಾಲಯ ಉದ್ಯಮ ಪ್ರಮಾಣ ಪತ್ರವನ್ನು ಸಾರ್ವತ್ರಿಕವಾಗಿ ಉತ್ಪಾದನೆ, ಸೇವಾ ವಲಯ ಹಾಗೂ ವ್ಯಾಪಾರಗಳಂತಹ ಎಲ್ಲಾ ಕ್ಷೇತ್ರಗಳಿಗೆ ನೀಡುತ್ತಿರುವುದರಿಂದ ಸ್ಪಷ್ಟತೆ ಇಲ್ಲದೆ ಗೊಂದಲವಾಗುತ್ತಿದೆ. ಉದಾಹರಣೆಗೆ ನಿರ್ಮಾಣ ವಲಯವನ್ನು ಸೇವಾ ವಲಯವಾಗಿ ಪರಿಗಣಿಸಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ಇದರಿಂದಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಮೀಸಲಾದ ಎಂಎಸ್ಇಎಫ್ಸಿ ಕೌನ್ಸಿಲ್ನಲ್ಲಿ ಹೆಚ್ಚಿನ ಸಂಸ್ಥೆಗಳು ನಿರ್ಮಾಣ ವಲಯಕ್ಕೆ ಸೇರಿದವು ಇರುತ್ತವೆ. ಆಗ ಉತ್ಪಾದನಾ ವಲಯಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ಸಿಗುವುದಿಲ್ಲ. ಆದ್ದರಿಂದ ಉದ್ಯಮ ಪ್ರಮಾಣ ಪತ್ರವನ್ನು ನೀಡುವಾಗ, ಹೆಚ್ಚು ಸ್ಪಷ್ಟತೆಯನ್ನು ಹೊಂದಲು ವರ್ಗವಾರು ಸೂಚ್ಯಂಕವನ್ನು ರಚಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ ಎನ್ಎಸ್ಇಆರ್ಎಂಎ ಯೋಜನೆಯ ಬಡ್ಡಿ ರಿಯಾಯಿತಿ, ಎನ್ಎಸ್ ಐಸಿಯ ಕಚ್ಚಾ ವಸ್ತುಗಳ ನೆರವು ಯೋಜನೆಯ ಬಡ್ಡಿ ರಿಯಾಯಿತಿ, ಒಎನ್ಡಿಸಿ, ಜೆಮ್ ಮತ್ತು ಟ್ರೆಡ್ಸ್ ಪೋರ್ಟಲ್ ಹಾಗೂ ಇಎಸ್ಐಸಿಗೆ ಉದ್ಯೋಗದಾತರ ಕೊಡುಗೆಯ ಕಡಿತ ಸೇರಿದಂತೆ ಹಲವಾರು ಸಮಸ್ಯೆಗಳನ್ನು ವಿವರಿಸಿ ಮನವಿ ಪತ್ರವನ್ನು ನೀಡಿದರು.
ಇದನ್ನೂ ಓದಿ: ಸಾಧಕ ಕ್ರೀಡಾ ಪಟುಗಳಿಗೆ ವಿವಿಧ ಇಲಾಖೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿದ ಸಿಎಂ - offer letter to sports achievers