ಬೆಂಗಳೂರು: ನಮ್ಮ ಮೆಟ್ರೋ ಆರಂಭಿಸಿರುವ ಗುಲಾಬಿ ಮಾರ್ಗದ 13 ಕಿಲೋ ಮೀಟರ್ ಸುರಂಗ ಮಾರ್ಗವು ಅಂತಿಮ ಹಂತಕ್ಕೆ ಬಂದಿದ್ದು, ಅಕ್ಟೋಬರ್ ನವೆಂಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಬಿಎಂಆರ್ಸಿಎಲ್ ಮೂಲಗಳು ತಿಳಿಸಿವೆ.
ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಭೂಗತ ಸುರಂಗ ಮಾರ್ಗ ಕಾಮಗಾರಿಯು ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದು ತಲುಪಿದ್ದು, ಇದು ಬನ್ನೇರುಘಟ್ಟ ರಸ್ತೆಯಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ಪಿಂಕ್ ಲೇನ್ ಸುರಂಗ ಮಾರ್ಗವಾಗಿದೆ. ಇದೇ ಆಗಸ್ಟ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಸಿವಿಲ್ ಕಾಮಗಾರಿ, ಟ್ರ್ಯಾಕ್ ಹಾಕುವ ಕಾರ್ಯ ನಡೆಯುತ್ತಿದೆ.
21.26 ಕಿ.ಮೀ ಉದ್ದದ ಮಾರ್ಗ ಇದಾಗಿದ್ದು, ಸುಮಾರು 13 ಕಿ.ಮೀ ಭೂಗತ ಕಾಮಗಾರಿಯಲ್ಲೇ ರೈಲು ಸಾಗುವಂತೆ ಕೊರೆಯಲಾಗುತ್ತಿದೆ. 7.5 ಕಿ.ಮೀ ಎತ್ತರದ ಮಾರ್ಗ ಹೊಂದಿರುವ ಈ ಪಿಂಕ್ ಮಾರ್ಗದಲ್ಲಿ 18 ನಿಲ್ದಾಣಗಳು ಇವೆ. ಗುಲಾಬಿ ಮಾರ್ಗವನ್ನು ಮೂರು ವಿಭಾಗವಾಗಿ ವಿಂಗಡಿಸಲಾಗಿದ್ದು, ಮೊದಲ ಎರಡು ಹಂತದಲ್ಲಿ ಸುರಂಗ ಕಾಮಗಾರಿ ಮುಗಿದಿದೆ. ಮೂರನೇ ಹಂತದಲ್ಲಿ ಸುರಂಗ ಕೊರೆಯುವ ಕೆಲಸ ಅಂತಿಮ ಹಂತಕ್ಕೆ ಬಂದಿದೆ. ಸದ್ಯ ಶೇ.94 ರಷ್ಟು ಕೆಲಸ ಪೂರ್ಣಗೊಂಡಿದೆ. ಈ ಹಿಂದೆ ಕೆ.ಜಿ. ಹಳ್ಳಿ ಮತ್ತು ನಾಗವಾರ ನಡುವೆ 935 ಮೀಟರ್ ಸುರಂಗ ಕಾರ್ಯವು ಸುಧಾರಿತ ಟಿಬಿಎಂ ಯಂತ್ರ ಭದ್ರಾ ಸಹಾಯದಿಂದ ಕೊರೆಯಲಾಗಿತ್ತು.
ಇದನ್ನೂ ಓದಿ: ಬೆಂಗಳೂರು: ಮೈಕೋ ಸಿಗ್ನಲ್ನಿಂದ ಆನೆಪಾಳ್ಯ ಜಂಕ್ಷನ್ವರೆಗೆ 1 ವರ್ಷ ವಾಹನ ಸಂಚಾರ ಬಂದ್ - Namma Metro
ಈಗ ಕೊನೆಯ ಹಂತದಲ್ಲಿ ಸುರಂಗ ಕೊರೆಯಲಾಗುತ್ತಿದ್ದು, ಮುಂದಿನ ಆಗಸ್ಟ್ ವೇಳೆಗೆ ಕಾರ್ಯ ಮುಗಿಸಿ ಹೊರಬರಲಿದೆ. ಮೆಟ್ರೋ ಮಾರ್ಗದಲ್ಲಿನ ಈ ಸುರಂಗ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ಟ್ರ್ಯಾಕ್ ಅಳವಡಿಕೆ ಸೇರಿದಂತೆ ಇನ್ನಿತರ ಸಿವಿಲ್ ಕೆಲಸ ನಡೆಯುತ್ತವೆ. 2024ರ ಅಂತ್ಯದ ಹೊತ್ತಿಗೆ ಈ ಗುಲಾಬಿ ಮಾರ್ಗದಲ್ಲಿನ ಟ್ರ್ಯಾಕ್ ಅಳವಡಿಕೆ ಕೆಲಸ ಅಂತಿಮಗೊಂಡು, ಸಿಗ್ನಲಿಂಗ್ ಕೆಲಸ ನಡೆಯುವ ಸಾಧ್ಯತೆ ಇದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.