ಬೆಂಗಳೂರು: ರಾಜ್ಯ ಔಷಧ ಸರಬರಾಜು ನಿಗಮಕ್ಕೆ ಕಾಯಕಲ್ಪ ನೀಡುವತ್ತ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, "ಬಾಣಂತಿಯರ ಸಾವಿಗೂ ಔಷಧ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ವಿಲೀನಕ್ಕೂ ಸಂಬಂಧಿವಿಲ್ಲ. ಔಷಧ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುತಕ್ಷತಾ ಇಲಾಖೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ವಿಲೀನಗೊಳಿಸುವ ಪ್ರಸ್ತಾವನೆ ಈ ಹಿಂದೆಯೇ ಇತ್ತು. ಗುಣಮಟ್ಟ ಪರಿಶೀಲನೆಯಲ್ಲಿ ಔಷಧ ನಿಯಂತ್ರಣ ಇಲಾಖೆಗೆ ಮೇಲ್ವಿಚಾರಣೆಯ ಅಗತ್ಯತೆ ಇದೆ. ಐಎಎಸ್ ಮಟ್ಟದ ಅಧಿಕಾರಿ ಇದ್ದರೆ ಉತ್ತಮ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಸ್ಪಷ್ಟಪಡಿಸಿದರು.
"ಔಷಧ ಸರಬರಾಜು ನಿಗಮಕ್ಕೂ ಕಾಯಕಲ್ಪ ನೀಡುವ ಅಗತ್ಯತೆ ಇದೆ. KSMCL ಕರೆಯುವ ಟೆಂಡರ್ಗಳಲ್ಲಿ ಗುಣಮಟ್ಟದ ಔಷಧಗಳನ್ನು ಪೂರೈಸುವಂತಹ ದೊಡ್ಡ ಕಂಪನಿಗಳು ಪಾಲ್ಗೊಳ್ಳುವಂತಾಗಬೇಕು. ಇನ್ನಷ್ಟು ಪರಿಣಕಾರಿಯಾಗಿ ಔಷಧ ಗುಣಮಟ್ಟ ಹಾಗೂ ಉತ್ಪಾದನೆ ಕುರಿತಂತೆ ಪರಿಶೀಲನೆ ಆಗಬೇಕಿದೆ. ಈ ನಿಟ್ಟಿನಲ್ಲಿ ಟೆಂಡರ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಸೂಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಿಗಮ ಉತ್ತಮವಾಗಿ ಕಾರ್ಯನಿರ್ವಹಿಸುವತ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ" ಎಂದು ಹೇಳಿದರು.
"ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ವಿಚಾರದಲ್ಲಿ ಐವಿ ದ್ರಾವಣ ರಿಂಗರ್ ಲ್ಯಾಕ್ಟೇಟ್ ಪೂರೈಸಿದ ಕಂಪನಿಯ ವಿರುದ್ಧ ಪ್ರಾಸಿಕ್ಯೂಷನ್ ನಡೆಸುವಂತೆ ಸೂಚಿಸಲಾಗಿದೆ. ಐವಿ ದ್ರಾವಣದ 22 ಬ್ಯಾಚ್ಗಳ ವಿಚಾರದಲ್ಲಿ ನಮ್ಮ ರಾಜ್ಯದ ಡ್ರಗ್ ಕಂಟ್ರೋಲ್ನವರು ಸ್ಟ್ಯಾಂಡರ್ಡ್ ಕ್ವಾಲಿಟಿ ಹೊಂದಿಲ್ಲ ಎಂದು ವರದಿ ನೀಡಿದ್ದರೆ, ಸೆಂಟ್ರಲ್ ಡ್ರಗ್ ಲ್ಯಾಬ್ ಗುಣಮಟ್ಟ ಹೊಂದಿದೆ ಎಂದು ವರದಿ ಕೊಟ್ಟಿದ್ದಾರೆ. CDL ವರದಿಯೇ ಅಂತಿಮ ಆಗಿರುವುದರಿಂದ ಕಂಪನಿಯವರ ವಿರುದ್ಧ ಕ್ರಮ ಕೈಗೊಳ್ಳಲು ಕೆಲ ಅಡತಡೆ ಎದುರಾಗುತ್ತವೆ. ಈ ಹಿನ್ನೆಲೆಯಲ್ಲಿ ಸೆಂಟ್ರಲ್ ಡ್ರಗ್ ಲ್ಯಾಬ್ನವರಿಗೆ ಪತ್ರ ಬರೆಯಲಾಗಿದೆ" ಎಂದು ತಿಳಿಸಿದರು.
"ಬಾಣಂತಿಯರ ಸಾವಿನ ವಿಚಾರದಲ್ಲಿ ಲೋಕಾಯುಕ್ತರು ತನಿಖೆ ನಡೆಸುವಂತೆ ಬಿಜೆಪಿ ದೂರು ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಈ ವಿಚಾರದಲ್ಲಿ ಯಾವುದನ್ನು ಮುಚ್ಚಿಡುವ ಉದ್ದೇಶ ನಮಗಿಲ್ಲ. ಪ್ರತಿಯೊಂದು ಜೀವವು ನಮಗೆ ಮುಖ್ಯ. ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದಿಂದ ಸಮಸ್ಯೆ ಆಗಿದೆ ಎಂಬ ಅನುಮಾನಗಳು ಎದುರಾದ ತಕ್ಷಣವೇ ರಾಜ್ಯಾದ್ಯಂತ ಐವಿ ದ್ರಾವಣವನ್ನು ತಡೆಹಿಡಿಯಲಾಗಿದ್ದು, ಕಂಪನಿಯವರನ್ನು ಬ್ಲ್ಯಾಕ್ ಲಿಸ್ಟ್ಗೆ ಸೇರಿಸಲಾಗಿದೆ. ಎಲ್ಲಿ ಲೋಪದೋಷಗಳಾಗಿದೆ ಅದನ್ನ ಸರಿಪಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ನಾನು ಕೂಡ ಬಳ್ಳಾರಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಪರಿಶೀಲನೆ ನಡೆಸಲಾಗುವುದು" ತಿಳಿದರು.
ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: 'ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲೂ ಸಿದ್ಧ': ದಿನೇಶ್ ಗುಂಡೂರಾವ್