ಬೆಂಗಳೂರು: ಡಿಸಿಇಟಿ - 24ರಲ್ಲಿ ರ‍್ಯಾಂಕ್ ಪಡೆದಿರುವ ವಿಶೇಷಚೇತನ ಅಭ್ಯರ್ಥಿಗಳಿಗೆ ಅಂಗವಿಕಲತೆಯ ಅರ್ಹತೆ ಪರೀಕ್ಷಿಸಲು ಜುಲೈ 1ರಂದು ಇಲ್ಲಿನ ಕೆಇಎ ಕಚೇರಿಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಯುಜಿಸಿಇಟಿ-24ಕ್ಕೆ ಸಂಬಂಧಿಸಿದಂತೆ ಜೂನ್ 10 ರಿಂದ 12ರವರೆಗೆ ನಡೆದ ವೈದ್ಯಕೀಯ ತಪಾಸಣೆಗೆ ಗೈರುಹಾಜರಾದ ವಿಶೇಷಚೇತನ ಅಭ್ಯರ್ಥಿಗಳು ಕೂಡ ಜುಲೈ 1ರಂದು ತಪಾಸಣೆಗೆ ಬರಬಹುದು. ಈ ಮೊದಲು ತಪಾಸಣೆಗೆ ಹಾಜರಾಗಿದ್ದವರು ಪುನಃ ತಪಾಸಣೆಗೆ ಬರುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡಿಸಿಇಟಿ ಅರ್ಜಿಯ ಪ್ರತಿ, ಪ್ರವೇಶ ಪತ್ರ, ಅಭ್ಯರ್ಥಿಯ ಭಾವಚಿತ್ರ ಇರುವ ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣಪತ್ರ, ಕಿವುಡುತನದ ಸಮಸ್ಯೆ ಇರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರಗಳನ್ನು ತಪಾಸಣೆ ಸಂದರ್ಭದಲ್ಲಿ ತಂದಿರಬೇಕು ಎಂದು ತಿಳಿಸಿದ್ದಾರೆ.
ಜು.2ರಿಂದ 4ರವರೆಗೆ ದಾಖಲಾತಿ ಪರಿಶೀಲನೆ: ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಾತಿಗೆ ಹಾಗು ಮೊದಲನೇ ವರ್ಷದ ಆರ್ಕಿಟೆಕ್ಚರ್ ಕೋರ್ಸಿಗೆ ಅರ್ಹತೆಯನ್ನು ಪಡೆಯುವುದಕ್ಕಾಗಿ ಜು.2ರಿಂದ 4ವರೆಗೆ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಡಿಸಿಇಟಿ ರ‍್ಯಾಂಕ್ ಪಡೆದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.
ದಾಖಲಾತಿ ಪರಿಶೀಲನೆ ನಡೆಸುವ ಕಾಲೇಜುಗಳ ಪಟ್ಟಿಯನ್ನು ಕೆಇಎ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ತಮಗೆ ಹತ್ತಿರ ಇರುವ ಯಾವುದಾದರೊಂದು ಕಾಲೇಜಿಗೆ ಖುದ್ದು ಹೋಗಬೇಕು. ಆನ್ಲೈನ್ ಅರ್ಜಿ ಸಲ್ಲಿಸುವಾಗ ಕೋರಿರುವ ಕ್ಲೇಮುಗಳಿಗೆ ಪೂರಕವಾದ ಎಲ್ಲಾ ಶೈಕ್ಷಣಿಕ ಮೂಲ ದಾಖಲೆಗಳನ್ನು ಮತ್ತು ವಿಶೇಷ ಪ್ರವರ್ಗದ (ಎನ್ಸಿಸಿ, ಕ್ರೀಡೆ, ಸೈನಿಕರು, ಮಾಜಿ ಸೈನಿಕರು, ಸಿಎಪಿಎಫ್, ಮಾಜಿ-ಸಿಎಪಿಎಫ್- ಕ್ಲೇಮ್ ಮಾಡಿದ್ದಲ್ಲಿ ಮಾತ್ರ ಅರ್ಹತೆ) ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಡಿಸಿಇಟಿ-2024ರ ತಾತ್ಕಾಲಿಕ ಸರಿ ಉತ್ತರ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ