ವಿಜಯಪುರ: ಹೆಚ್.ಡಿ. ಕುಮಾರಸ್ವಾಮಿಯವರು ಬಿಜೆಪಿಗೆ ಹೋಗಿ ದಾರಿ ತಪ್ಪಿದ್ದಾರೆ. ಅದಕ್ಕಾಗೆ ದಾರಿ ತಪ್ಪಿದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೈಗಾರಿಕ ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಮಹಿಳೆಯರು ದಾರಿತಪ್ಪಿದ್ದಾರೆ ಎಂಬ ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾರಿ ತಪ್ಪಿದ್ದಾರೆ ಎಂದರೆ ಏನು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಲಿ. ಗ್ಯಾರಂಟಿ ಯೋಜನೆಗಳ ಹಣದಿಂದ ಮಕ್ಕಳನ್ನು ಶಾಲೆಗೆ ಕಳುಹಿಸೋದು ದಾರಿ ತಪ್ಪಿದ ಹಾಗೆಯೇ?, ಅನ್ನಭಾಗ್ಯದಿಂದ ಹಸಿದ ಹೊಟ್ಟೆಗೆ ಊಟ ನೀಡಿದ್ದು ದಾರಿ ತಪ್ಪಿದ ಹಾಗೆಯೇ?, ಒಳ್ಳೆಯ ಬಟ್ಟೆ ಹಾಕಿಕೊಂಡಿದ್ದು ದಾರಿ ತಪ್ಪಿದ ಹಾಗೆಯೇ?, ಗ್ಯಾಸ್ ಸಿಲಿಂಡರ್ ಹಾಗೂ ಇತರೆ ವಸ್ತುಗಳ ಬೆಲೆ ಏರಿಕೆ ಮಧ್ಯೆ ಸಮಾಧಾನ ಪಟ್ಟು ಮನೆ ನಡೆಸಿದ್ದು ದಾರಿ ತಪ್ಪಿದ ಹಾಗೆಯೇ?, ದಾರಿ ತಪ್ಪಿದ್ದು ಏನು ಎಂಬುದನ್ನು ಹೆಚ್ಡಿಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಡಾ. ಬಿ. ಆರ್.ಅಂಬೇಡ್ಕರ್ ಅವರು ಪಕ್ಷಾತೀತ ಮತ್ತು ಜಾತ್ಯತೀತ ವ್ಯಕ್ತಿ, ಅವರು ಕೇವಲ ದಲಿತರಿಗೆ ಮಾತ್ರವಲ್ಲ, ದೇಶದ ಎಲ್ಲರಿಗೂ ಸೇರಿದವರು ಎಂದು ಹೇಳಿದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ - HD Kumaraswamy