ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ 5ನೇ ಬಾರಿ ಆಯ್ಕೆ ಬಯಸಿ ಇಂದು ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಹೆಚ್. ಸಿ. ಮಹದೇವಪ್ಪ ಸೇರಿದಂತೆ ಇತರ ಸಚಿವರು ಭಾಗವಹಿಸಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮರಿತಿಬ್ಬೇಗೌಡ, ಕಳೆದ 4 ಬಾರಿ ಪರಿಷತ್ಗೆ ಆಯ್ಕೆಯಾಗಿ ಶಿಕ್ಷಕರ ಧ್ವನಿಯಾಗಿರುವೆ. ಇದೀಗ 5ನೇ ಬಾರಿಗೆ ಅವಕಾಶವನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಹಾಗಾಗಿ ಎಲ್ಲ ನಾಯಕರಿಗೂ ಅಭಿನಂದನೆ ಸಲ್ಲಿಸುವೆ. ಈ ಬಾರಿಯೂ ಶಿಕ್ಷಕ ಬಂಧುಗಳು ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದಿದ್ದು ವಿಶೇಷ. ಮುಖ್ಯವಾಗಿ ಕಳೆದ 4 ಬಾರಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದೇನೆ. ಈ ಬಾರಿ ಆಡಳಿತ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ವಿಶೇಷವಾಗಿದೆ. ಮುಖ್ಯವಾಗಿ ಸಿಎಂ ಸಿದ್ದರಾಮಯ್ಯನವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮುಖ್ಯವಾಗಿದ್ದು, ಅದುವೇ ನನ್ನ ಗೆಲುವಿಗೆ ಸಹಾಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಶಿಕ್ಷಕರು ಪದವೀಧರರಾಗಿದ್ದು ಯಾವುದು ತಪ್ಪು, ಯಾವುದು ಸರಿ ಎಂಬ ವಿಚಾರದ ಬಗ್ಗೆ ಗೊತ್ತಿರುತ್ತದೆ. ಈ ಬಾರಿ ದಕ್ಷಿಣದ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಂಭವವಿದೆ ಎಂದು ಅಭಿಪ್ರಾಯಪಟ್ಟರು.
ಮೊದಲ ಬಾರಿಗೆ ಪಕ್ಷೇತರರಾಗಿ ದಕ್ಷಿಣ ಶಿಕ್ಷಕ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮರಿತಿಬ್ಬೇಗೌಡ, ಬಳಿಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ, ಅನಂತರ ಎರಡು ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈಗ 5ನೇ ಬಾರಿ ಕಾಂಗ್ರೆಸ್ನಿಂದ ಅಖಾಡಕ್ಕಿದಿರುವುದು ವಿಶೇಷವಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಯ ನಂತರ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ ಆಗಲಿದೆ: ಸಿಎಂ - CM SIDDARAMAIAH