ಬೆಂಗಳೂರು: ತೆರಿಗೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆ ಶುಕ್ರವಾರ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್ ಪರವಾನಗಿಯನ್ನು ರದ್ದು ಮಾಡಿ ಬೀಗ ಜಡಿದಿದ್ದಾರೆ.
ಈ ಹಿಂದೆ ಕೂಡ ಹಲವು ಬಾರಿ ಈ ಮಾಲ್‌ಗೆ ಪಾಲಿಕೆ ಬೀಗ ಹಾಕಿತ್ತು. ಹಲವು ಬಾರಿ ಎಚ್ಚರಿಕೆ ಕೊಟ್ಟರೂ ನಿರ್ಲಕ್ಷ್ಯ ವಹಿಸಿದ್ದ ಮಂತ್ರಿ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾಾರೆ. ತೆರಿಗೆ ಹಣ ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ನೋಟಿಸ್ ಅಂಟಿಸುವುದರ ಜೊತೆಗೆ ಮಾಲ್ ಸೀಜ್ ಮಾಡಲಾಗಿದೆ. 34 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಮಾಲ್‌ಗೆ ಬೀಗ ಜಡಿಯಲಾಗಿದೆ ಎಂದು ತಿಳಿದುಬಂದಿದೆ.
8ನೇ ಬಾರಿ ಕ್ರಮ ತೆಗೆದುಕೊಂಡ ಅಧಿಕಾರಿಗಳು: ಮಂತ್ರಿ ಮಾಲ್‌ಗೆ ಪಾಲಿಕೆ ಅಧಿಕಾರಿಗಳು ಬೀಗ ಹಾಕುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ 7 ಬಾರಿ ಪಾಲಿಕೆ ಈ ಕ್ರಮ ಕೈಗೊಂಡಿದೆ. ಇದೀಗ ಎಂಟನೇ ಬಾರಿಗೆ ಪಾಲಿಕೆ ಮಾಲ್‌ಗೆ ಬೀಗ ಹಾಕಿದೆ. ಪ್ರತಿ ಬಾರಿ ಮಾಲ್‌ಗೆ ಬೀಗ ಜಡಿದಾಗಲೂ ಮಂತ್ರಿ ಮಾಲ್ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಿ ಅನುಮತಿ ಪಡೆದು ವ್ಯವಹಾರ ನಡೆಸಿದೆ. ಆದರೆ, ಇದೀಗ ಮತ್ತೆ ಇದೇ ಪ್ರಕರಣ ಮುಂದುವರೆದಿದ್ದು, 8ನೇ ಬಾರಿಗೆ ಮಾಲ್‌ಗೆ ಬೀಗ ಹಾಕಲಾಗಿದೆ.
ಶುಕ್ರವಾರದಿಂದ ಭಾನುವಾರದವರೆಗೆ ಸರ್ಕಾರಿ ರಜೆ ಇರುವುದರಿಂದ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆ ಇತ್ತು. ಸದ್ಯಕ್ಕೆ ಮಾಲ್ ಕುರಿತು ಬಿಬಿಎಂಪಿ ಮತ್ತು ಮಾಲ್ ಪರವಾಗಿರುವ ವಕೀಲರ ತಂಡ ಮುಂದಿನ ನಡೆ ಏನು ಎನ್ನುವುದರ ಕುರಿತು ಚಿಂತನೆ ನಡೆಸಿದೆ.
ಇದನ್ನೂ ಓದಿ: ಚಿತ್ರದುರ್ಗ: ವಕೀಲ ದೇವರಾಜೇಗೌಡ ಪೊಲೀಸ್ ವಶಕ್ಕೆ - devaraje gowda in police custody