ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು (ಎಸ್ಇಪಿ) 2024–25ನೇ ಸಾಲಿನಿಂದಲೇ ಜಾರಿಗೆ ತರುವ ನಿಟ್ಟಿನಲ್ಲಿ ರೂಪಿಸಿರುವ ಪಠ್ಯಕ್ರಮಗಳಿಗೆ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆಯಲ್ಲಿ ನಡೆದ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಮಂಗಳವಾರ ಅನುಮೋದನೆ ಸಿಕ್ಕಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ನಿಖಾಯದ 27 ಕೋರ್ಸ್, ಕಲಾ ನಿಖಾಯದ 29 ಕೋರ್ಸ್ಗಳ ವಿವಿಧ ಸೆಮಿಸ್ಟರ್ಗಳ ಎಸ್ಇಪಿ ಪಠ್ಯಕ್ರಮಗಳಿಗೆ ಅನುಮೋದನೆ ನೀಡಲಾಯಿತು. ಆದರೆ, ವಾಣಿಜ್ಯ ನಿಖಾಯದ 11 ಕೋರ್ಸ್ಗಳ ಮೊದಲ ಸೆಮಿಸ್ಟರ್ನ ಎಸ್ಇಪಿ ಪಠ್ಯಕ್ರಮಕ್ಕೆ ಮಾತ್ರ ಅನುಮೋದನೆ ನೀಡಲಾಯಿತು.
ಕುಲಪತಿ ಪ್ರೊ.ಪಿ.ಎಲ್.ಧರ್ಮ ಮಾತನಾಡಿ, "ಪದವಿ ಕೋರ್ಸ್ಗಳಿಗೆ ರಾಜ್ಯ ಶಿಕ್ಷಣ ನೀತಿ ಆಯೋಗದ ಮಾರ್ಗಸೂಚಿಯನ್ವಯ ಅಧ್ಯಯನ ಮಂಡಳಿಗಳು ಪಠ್ಯಕ್ರಮಗಳನ್ನು ರೂಪಿಸಿವೆ. ಅಧ್ಯಯನ ಮಂಡಳಿಯ ಅಧ್ಯಾಪಕರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೆವು. ಆಯಾ ಕ್ಷೇತ್ರದ ಈಚಿನ ಬೆಳವಣಿಗೆಗಳನ್ನು ಅವಲೋಕಿಸಿ ಉತ್ತಮ ಪಠ್ಯಕ್ರಮ ರೂಪಿಸಿದ್ದಾರೆ" ಎಂದರು.
ಮಂಗಳೂರು ಧರ್ಮಪ್ರಾಂತ ಕ್ರೈಸ್ತ ಧರ್ಮ ಪೀಠ ಆರಂಭಿಸಲು ಉದ್ದೇಶಿಸಿರುವ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್–ಇಂಟೆಗ್ರೇಟೆಡ್ ಪಾಸ್ಟೋರಲ್ ಸೋಷಿಯಲ್ ಕಮ್ಯೂನಿಕೇಷನ್ ಸರ್ಟಿಫಿಕೇಟ್ ಕೋರ್ಸ್ನ ಪಠ್ಯಕ್ರಮಕ್ಕೂ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಆಗಸ್ಟ್ 12ರಿಂದ ಪದವಿ ತರಗತಿಗಳು ಆರಂಭ: "2024–25ನೇ ಸಾಲಿನ ಪದವಿ ತರಗತಿಗಳು ಆಗಷ್ಟ್ 12ರಿಂದ ಮತ್ತು ಸ್ನಾತಕೋತ್ತರ ಪದವಿ ತರಗತಿಗಳು ಸೆ.9ರಿಂದ ಆರಂಭವಾಗಲಿವೆ. 2023–24ಮನೇ ಸಾಲಿನ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಪ್ರಗತಿಯಲ್ಲಿದ್ದು, ಶೇ.70ರಷ್ಟು ಪೂರ್ಣಗೊಂಡಿದೆ" ಎಂದು ಕುಲಪತಿ ತಿಳಿಸಿದರು.
ಡಿಜಿಲಾಕರ್ ವ್ಯವಸ್ಥೆ: ಅಂಕಪಟ್ಟಿಗಳನ್ನು ಡಿಜಿಲಾಕರ್ನಲ್ಲಿ ಅಳವಡಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಹಾಗಾಗಿ ಅದನ್ನು ಮುದ್ರಿಸಿಕೊಡಲು ಅವಕಾಶ ಇಲ್ಲ. ಅದನ್ನು ನಾವು ಪಾಲಿಸುತ್ತಿದ್ದೇವೆ. ವಿದ್ಯಾರ್ಥಿಗಳು ಅಂಕಪಟ್ಟಿಗಳನ್ನು ಡಿಜಿಲಾಕರ್ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಎಲ್ಲ ಅಂಕಪಟ್ಟಿಗಳನ್ನು ನಾವು ನ್ಯಾಷನಲ್ ಅಕಾಡೆಮಿಕ್ ಡೆಪೊಸಿಟರಿ (ಎನ್ಎಡಿ) ಸಂಸ್ಥೆಗೆ ನೀಡಲಿದ್ದೇವೆ. ಅವರೇ ಅದನ್ನು ಕಾಲಕಾಲಕ್ಕೆ ಡಿಜಿಲಾಕರ್ ವ್ಯವಸ್ಥೆಯಲ್ಲಿ ಅಳವಡಿಸುತ್ತಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಅಂಕಪಟ್ಟಿಯಲ್ಲಿ ಅಂಕಗಳನ್ನು ಮುದ್ರಿಸಲು ಅವಕಾಶವಿಲ್ಲ. ಕೇವಲ ದರ್ಜೆಯನ್ನು ಮಾತ್ರ ನಮೂದಿಸಲಾಗುತ್ತದೆ. ಹೊಸ ವ್ಯವಸ್ಥೆ ಬಗ್ಗೆ ಅರಿವಿಲ್ಲದೇ ಕೆಲವು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ವಿದೇಶಿ ಭಾಷೆಗಳ ಕಲಿಕೆಗೆ ಅವಕಾಶ - Benglauru City University