ಮಂಗಳೂರು: ನಗರದ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕರಿಬ್ಬರು ಅದರಡಿ ಸಿಲುಕಿದ್ದರು. ಈ ಪೈಕಿ ಒಬ್ಬ ಕಾರ್ಮಿಕನನ್ನು ರಕ್ಷಿಸಲಾಗಿದ್ದು, ಇನ್ನೊಬ್ಬ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದ ಮೂಲದ ಚಂದನ್ ಕುಮಾರ್ ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ರಾಜ್ಕುಮಾರ್ನನ್ನು ರಕ್ಷಿಸಲಾಗಿದೆ.
ಸತತ 7 ಗಂಟೆ ಕಾರ್ಯಾಚರಣೆ ನಡೆಸಿದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ಮಣ್ಣಿನಡಿಯಿಂದ ಚಂದನ್ ಕುಮಾರ್ ಮೃತದೇಹವನ್ನು ಮೇಲಕ್ಕೆತ್ತಿದೆ. ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.
ಕಾಂಕ್ರೀಟ್ ಸ್ಲ್ಯಾಬ್ ಅನ್ನು ರಂಧ್ರ ಕೊರೆದು ಮಣ್ಣಿನಡಿ ಸಿಲುಕಿದ್ದ ಚಂದನ್ ಕುಮಾರ್ನನ್ನು ಪತ್ತೆ ಮಾಡಲಾಗಿತ್ತು. ಮಧ್ಯಾಹ್ನ 3.45ರ ಸುಮಾರಿಗೆ ಆತನ ಕೈ ರಂಧ್ರ ಕೊರೆದಿರುವ ಸ್ಲ್ಯಾಬ್ ನಿಂದ ಕಾಣಿಸುತ್ತಿತ್ತು. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹಾಗೂ ವೈದ್ಯರ ತಂಡ ಆತನ ಪಲ್ಸ್ ರೇಟ್ ತಪಾಸಣೆ ನಡೆಸಿದ್ದರು. ಈ ವೇಳೆ ಆತನ ರಕ್ತದೊತ್ತಡದಲ್ಲಿ ಏರುಪೇರು ಕಂಡಿದೆ. ಆದ್ದರಿಂದ ಆತನಿಗೆ ಪ್ರಥಮ ಚಿಕಿತ್ಸೆ ನೀಡುವ ಸಲುವಾಗಿ ಗ್ಲೋಕೋಸ್ ಅನ್ನು ಡ್ರಿಪ್ಸ್ ಮೂಲಕ ನೀಡಲಾಗಿತ್ತು. ಈ ವೇಳೆ ಆತನ ಪರಿಸ್ಥಿತಿ ಗಂಭೀರವಾಗಿತ್ತು. ಕೊನೆಗೆ ರಾತ್ರಿ ಏಳೂವರೆ ವೇಳೆಗೆ ಆತನ ಮೃತದೇಹವನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.
ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಡಿಸಿ ಸಂತೋಷ್ ಕುಮಾರ್, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಡಿಸಿಪಿ ಸಿದ್ದಾರ್ಥ್ ಗೋಯಲ್ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು.
ಕಟ್ಟಡಕ್ಕೆ ವಾಟರ್ ಪ್ರೂಫ್ ಮಾಡುತ್ತಿದ್ದ ವೇಳೆ ಕಟ್ಟಡದ ಬದಿಯಲ್ಲಿದ್ದ ಮಣ್ಣು ಏಕಾಏಕಿ ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಓದಿ: ಸುಳ್ಯ: ಕುಸಿದ ಮಣ್ಣಿನಡಿ ಸಿಲುಕಿದ ಕಾರ್ಮಿಕ ಕೂದಲೆಳೆ ಅಂತರದಲ್ಲಿ ಪಾರು - Laborer Rescued