ಮಂಗಳೂರು: ವರದಕ್ಷಿಣೆಗಾಗಿ ಕಿರುಕುಳ ನೀಡಿ ಮಹಿಳೆಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿ, ಆತನ ಮೊದಲ ಪತ್ನಿ, ಅತ್ತೆ ಮತ್ತು ಮೊದಲನೇ ಪತ್ನಿಯ ಅಣ್ಣನಿಗೆ ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 6 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಭದ್ರಾವತಿ ತಾಲೂಕಿನ ತಿಪ್ಲಾಪುರ ಗ್ರಾಮದ ಮಜೀದ್ ಅಹಮ್ಮದ್ (35), ಆತನ ಮೊದಲ ಪತ್ನಿ ಸಪೂರ ಅಂಜುಮ್ (28), ತಾಯಿ ಮಮ್ತಾಜ್ ಬಾನು (60) ಮತ್ತು ಸಪೂರಳ ಅಣ್ಣ ಭದ್ರಾವತಿ ಹಳೆನಗರದ ಕಾಜಿ ಮೊಹಲ್ಲ 4ನೇ ಕ್ರಾಸ್ ನಿವಾಸಿ ಜಮೀರ್ ಅಹಮ್ಮದ್ (30) ಶಿಕ್ಷೆಗೊಳಗಾದವರು. ಚೆನ್ನಗಿರಿಯ ರೇಷ್ಮಾ ಬಾನು (26) ಕೊಲೆಗೀಡಾದ ಮಹಿಳೆ.
ಪ್ರಕರಣದ ವಿವರ: ರೇಷ್ಮಾ ಬಾನು ಅವರನ್ನು ಮಜೀದ್ ಅಹಮ್ಮದ್ ಎರಡನೇ ಮದುವೆಯಾಗಿದ್ದನು. ಇಬ್ಬರೂ ಕಾಟಿಪಳ್ಳ 9ನೇ ಬ್ಲಾಕ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಜೀದ್ ಸುರತ್ಕಲ್‌ನಲ್ಲಿ ಗ್ಯಾರೇಜ್ ನಡೆಸುತ್ತಿದ್ದ. ದಿನ ಕಳೆದಂತೆ ಮಜೀದ್ ತನ್ನ ತಾಯಿ ಹಾಗೂ ಇತರರೊಂದಿಗೆ ಸೇರಿ ರೇಷ್ಮಾ ಬಾನುಗೆ ವರದಕ್ಷಿಣೆ ತರುವಂತೆ ದೈಹಿಕ ಮತ್ತು ಮಾನಸಿಕವಾಗಿ ಪೀಡಿಸುತ್ತಿದ್ದ. 2019ರ ಏ.28 ರಂದು ಮಧ್ಯಾಹ್ನ ರೇಷ್ಮಾ ಕೊಠಡಿಯಲ್ಲಿ ಮಲಗಿದ್ದರು. ಈ ಸಂದರ್ಭದಲ್ಲಿ ಮಜೀದ್ ಗ್ಯಾರೇಜ್‌ನಿಂದ ಬಂದು ದಿಂಬುವಿನಿಂದ ಆಕೆಯ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಆ ಬಳಿಕ ನಾಲ್ವರು ಸೇರಿ ಚೂಡಿದಾರ ಶಾಲ್‌ನಿಂದ ಶವದ ಕುತ್ತಿಗೆ ಬಿಗಿದು ಫ್ಯಾನ್‌ಗೆ ನೇಣು ಹಾಕಿದ್ದರು.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದ್ದು, ಇದೀಗ ಕೋರ್ಟ್ ದಂಡಸಹಿತ ಜೈಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ - Valmiki Corporation scam