ಯಲಹಂಕ: ನೂರು ಎಕರೆ ವಿಸ್ತೀರ್ಣದ ಜಮೀನುಗಳಿಗೆ ಸಂಪರ್ಕಿಸುವ ರಸ್ತೆ ಒತ್ತುವರಿಯಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ರಸ್ತೆ ಒತ್ತುವರಿ ತೆರವು ಕಾರ್ಯಚರಣೆ ನಡೆಸುತ್ತಿದ್ದ ವೇಳೆ, ಒತ್ತುವರಿದಾರ ಜೆಸಿಬಿ ಯಂತ್ರಕ್ಕೆ ಬೆಂಕಿ ಇಟ್ಟ ಘಟನೆ ಯಲಹಂಕ ತಾಲೂಕಿನ ಹೆಸರಘಟ್ಟ ಬಳಿಯ ಶಿವಕೋಟೆ ಗ್ರಾಮದಲ್ಲಿ ಇಂದು ನಡೆದಿದೆ. ಬೆಂಕಿ ಇಟ್ಟು ಅಧಿಕಾರಿಗಳನ್ನು ಹೆದರಿಸಲು ಮುಂದಾದ ಒತ್ತುವರಿದಾರನ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ.
ಶಿವಕೋಟೆ ಗ್ರಾಮದ ಬಚ್ಚೇಗೌಡರ ಕುಟುಂಬ ಸುಮಾರು 100 ಎಕರೆ ಜಮೀನುಗಳಿಗೆ ಸಂಪರ್ಕಿಸುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಬಂದ್ ಮಾಡಿತ್ತು. ಸರ್ವೇ ನಂಬರ್ 10/7 ಜಮೀನಿನಲ್ಲಿ ಹಾದುಹೋಗುವ ಮುದುಕದಹಳ್ಳಿಯ ಸಂಪರ್ಕ ರಸ್ತೆ ಒತ್ತುವರಿ ಮಾಡಲಾಗಿತ್ತು. ರಸ್ತೆ ಒತ್ತುವರಿ ತೆರವು ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡುತ್ತಿದ್ದರು. ಈ ವೇಳೆ ಬಚ್ಚೇಗೌಡರ ಮಗ ಚೇತನ್ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ. ಇದರ ಜೊತೆಗೆ ಮದ್ಯದ ಬಾಟಲ್ನಲ್ಲಿ ಪೆಟ್ರೋಲ್ ತಂದು ಜೆಸಿಬಿ ಮೇಲೆ ಸುರಿದು ಬೆಂಕಿ ಇಟ್ಟಿದ್ದಾರೆ. ಬೆಂಕಿಯ ಜ್ವಾಲೆಗೆ ಜೆಸಿಬಿ ಸುಟ್ಟು ಹೋಗಿದೆ. ಚೇತನ್ ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ ನಡೆದ ಭೂ ಒತ್ತುವರಿ: ರಾತ್ರೋರಾತ್ರಿ ಐದು ಎಕರೆ ಕೆರೆ ಕಣ್ಮರೆ